ಮಂಗಳೂರು: ರಾಜ್ಯ ಬಿಜೆಪಿ ಸರಕಾರವು ಅಲ್ಪಸಂಖ್ಯಾತ ಸಮುದಾಯಗಳ ಸಬಲೀಕರಣಕ್ಕಾಗಿ ನಿಗದಿಗೊಳಿಸಲಾದ ಅನುದಾನವನ್ನು ಕಡಿತಗೊಳಿಸಿರುವುದನ್ನು ಖಂಡಿಸಿದ ಮುಸ್ಲಿಂ ಚಿಂತಕರ ಚಾವಡಿ ಅಪರ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದೆ.
ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೂಲಕ ಅಲ್ಪಸಂಖ್ಯಾತ ಸಮುದಾಯಗಳ ಜನಪರ ಕಲ್ಯಾಣ ಯೋಜನೆಗಳಿಗೆ ನಿಗದಿಗೊಳಿಸಲಾದ ಅನುದಾನವನ್ನು ಬೃಹತ್ ಪ್ರಮಾಣದಲ್ಲಿ ಕಡಿತ ಗೊಳಿಸಿರುವುದು ಖಂಡನೀಯ. ಉನ್ನತ ವ್ಯಾಸಂಗ, ವಿದೇಶದಲ್ಲಿ ಶಿಕ್ಷಣ ಪಡೆಯಲು ನೀಡಲಾಗುತ್ತಿದ್ದ ಪ್ರೋತ್ಸಾಹ ಧನ, ವಿವಿಧ ಹಂತದ ವಿದ್ಯಾಭ್ಯಾಸಗಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನಗಳಿಗೆ ಅನುದಾನ ನೀಡದೆ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳನ್ನು ಅತಂತ್ರಗೊಳಿಸಿ ವಿದ್ಯಾಭ್ಯಾಸ ಮೊಟಕುಗೊಳಿಸುವ ಸ್ಥಿತಿ ಸರ್ಕಾರ ನಿರ್ಮಿಸಿದೆ ಎಂದು ಎಂದು ಮನವಿಯಲ್ಲಿ ಹೇಳಿದೆ.
ಈ ಸಂದರ್ಭ ಚಿಂತಕರ ಚಾವಡಿಯ ರಾಜ್ಯ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಮಾಜಿ ತಾಪಂ ಸದಸ್ಯ ಎನ್.ಇ. ಮುಹಮ್ಮದ್, ಸಾಮಾಜಿಕ ಕಾರ್ಯಕರ್ತರಾದ ಬಾವ ಪದರಂಗಿ, ಅಬ್ದುಲ್ ಖಾದರ್ ಇಡ್ಮ, ಇಮ್ತಿಯಾಝ್ ಪಾಂಡೇಶ್ವರ, ನೌಷಾದ್ ಬೆಂಗ್ರೆ ಉಪಸ್ಥಿತರಿದ್ದರು.
Kshetra Samachara
09/12/2020 10:54 pm