ಬಂಟ್ವಾಳ: ಸರ್ವಜ್ಞ ಅಕಾಡೆಮಿ ಇ-ಲರ್ನಿಂಗ್ ಪ್ಲಾಟ್ಫಾರ್ಮ್ ಅನ್ನು ಶನಿವಾರ ಡಾಕ್ಟರ್ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಉದ್ಘಾಟಿಸಿದರು.
ಕಲ್ಲಡ್ಕದ ನೇತಾಜಿ ಸಭಾಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂಸ್ಥೆಯನ್ನು ಉದ್ಘಾಟಿಸಿದ ಅವರು, ಭಾರತದ ಯುವ ಪೀಳಿಗೆ ಅತ್ಯಂತ ಪ್ರತಿಭಾವಂತವಾಗಿದ್ದು ಆತ್ಮ ನಿರ್ಭರ ಭಾರತದ ಕಡೆಗೆ ದೇಶವನ್ನು ಕೊಂಡೊಯ್ಯಲು ಸಮರ್ಥವಾಗಿದೆ ಎಂದರು.
ಅತ್ಯಂತ ಎಳೆಯ ವಯಸ್ಸಿನಲ್ಲೇ ಬಹುದೊಡ್ಡ ಕನಸನ್ನು ಕಂಡು ಅದನ್ನು ಸಾಕಾರಗೊಳಿಸಲು ಸ್ಪಷ್ಟ ಹೆಜ್ಜೆಗಳನ್ನು ಇಡುತ್ತಿರುವ ಸರ್ವಜ್ಞ ಅಕಾಡೆಮಿಯ ಸಿಇಒ ಶ್ರೀನಿಧಿ ಭಟ್, ತಂತ್ರಜ್ಞಾನದ ಸಮರ್ಥ ಬಳಕೆಯ ಮೂಲಕ ಗುಣಮಟ್ಟದ ಶಿಕ್ಷಣವನ್ನು ಪ್ರತಿಯೊಬ್ಬರ ಮನೆ ಮನೆಗಳಿಗೆ ತಲುಪಿಸುವ ಜವಾಬ್ದಾರಿ ಹೊತ್ತಿರುವುದು ಶ್ಲಾಘನೀಯ ಎಂದು ಡಾ. ಕಲ್ಲಡ್ಕ ಪ್ರಭಾಕರ ಭಟ್ಟರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸರ್ವಜ್ಞ ಅಕಾಡೆಮಿಯ ಸ್ಥಾಪಕರು ಮತ್ತು ನಿರ್ದೇಶಕರಾದ ಶ್ರೀನಿಧಿ ಭಟ್ ಕಲ್ಲಡ್ಕ, ಪುತ್ತೂರು ಅಂಬಿಕಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಕಿಶೋರ್ ಭಟ್, ಮಂಗಳೂರಿನ ಶ್ರೀನಿವಾಸ ಯುನಿವರ್ಸಿಟಿಯ ಕಾಲೇಜ್ ಆಫ್ ಕಂಪ್ಯೂಟರ್ ಸೈನ್ಸ್ ಅಂಡ್ ಇನ್ಫರ್ಮೇಶನ್ ಸೈನ್ಸ್ನ ಸಹಾಯಕ ಪ್ರಾಧ್ಯಾಪಕರಾದ ಡಾ. ಕೃಷ್ಣಪ್ರಸಾದ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶ್ರೀನಿಧಿ ಭಟ್ ಅವರು ಅಂಗನವಾಡಿ ಶಿಕ್ಷಕಿಯಾಗಿ ಪ್ರಾಥಮಿಕ ಪಾಠಗಳನ್ನು ಕಲಿಸಿದ ಗುರುಗಳಾದ ಶ್ರೀಮತಿ ಬೇಬಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಸರ್ವಜ್ಞ ಅಕಾಡೆಮಿಯ ಮೂಲಕ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ.ಶ್ರೀನಿಧಿ ಭಟ್ ಅವರು 8ನೇ ತರಗತಿಯಲ್ಲಿದ್ದಾಗಲೇ ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನದ ಬಗ್ಗೆ ಆಕರ್ಷಿತರಾಗಿ ಸ್ವಯಂ ಕಲಿಕೆಯ ಮೂಲಕ ಭಟ್ ಇಂಡಿಯಾ ಮೀಡಿಯಾ ನೆಟ್ವರ್ಕ್ ಎಂಬ ತಮ್ಮದೇ ಐಟಿ ಕಂಪನಿಯನ್ನು ಆರಂಭಿಸುವಷ್ಟರ ಮಟ್ಟಿಗೆ ಉದ್ಯಮಶೀಲತೆಯನ್ನು ಮೆರೆದಿದ್ದಾರೆ.
ವೆಬ್ ಡಿಸೈನಿಂಗ್, ಮೊಬೈಲ್ App ಗಳ ಅಭಿವೃದ್ಧಿ, ಡಿಜಿಟಲ್ ಮೀಡಿಯಾ ಸೊಲ್ಯೂಷನ್ಸ್ ಜತೆಗೆ ಇದೀಗ ಸರ್ವಜ್ಷ ಅಕಾಡೆಮಿಯ ಮೂಲಕ ಇ-ಲರ್ನಿಂಗ್ ವೇದಿಕೆಯನ್ನು ಸ್ಥಾಪಿಸಿದ್ದಾರೆ.
Kshetra Samachara
19/10/2020 04:02 pm