ಬಂಟ್ವಾಳ: ಕರಿಯಂಗಳ ಗ್ರಾಮದ ಪೊಳಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಂ.ಆರ್.ಪಿ.ಎಲ್. ಸಿಎಸ್ ಆರ್ ನಿಧಿಯಿಂದ 65 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಐದು ನೂತನ ಕೊಠಡಿಗಳನ್ನು ಶುಕ್ರವಾರ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶಾಸಕರು, ಎಂಆರ್ ಪಿಎಲ್ ನಂಥ ಸಂಸ್ಥೆ ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲದ ದೃಷ್ಟಿಯಿಂದ ಶಿಕ್ಷಣಕ್ಕಾಗಿ ಕೊಠಡಿ, ಲ್ಯಾಬೋರೇಟರಿ ಸೌಲಭ್ಯ ಒದಗಿಸುತ್ತಿರುವುದು ಅಭಿನಂದನೀಯ. ಮುಂದಿನ ದಿನದಲ್ಲಿ ಶಾಲೆಗೆ ಸಭಾಭವನ ನಿರ್ಮಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು ಎಂದರು.
ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಆಶೀರ್ವಚನ ನೀಡಿದರು. ಅತಿಥಿಯಾಗಿದ್ದ ಎಂ.ಆರ್.ಪಿ.ಎಲ್. ಡಿಜಿಎಂ ವೀಣಾ ಶೆಟ್ಟಿ ಮಾತನಾಡಿ, ಸಂಸ್ಥೆಯ ಲಾಭಾಂಶದಲ್ಲಿ ಒಂದಂಶ ಸಾರ್ವಜನಿಕ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ. ದ.ಕ.ಜಿಲ್ಲೆಯ ಬಹುತೇಕ ಶಾಲೆಗಳಿಗೆ ಸಂಸ್ಥೆಯ ಸಿಎಸ್ ಆರ್ ನಿಧಿಯಿಂದ ಕೊಠಡಿ, ಶೌಚಾಲಯ ಸಹಿತ ಮೂಲ ಸೌಕರ್ಯ ಪೂರೈಸಲಾಗಿದೆ ಎಂದು ಹೇಳಿದರು.
ಎಂ.ಆರ್.ಪಿ.ಎಲ್ ನ ಸಿಎಸ್ ಆರ್ ವಿಭಾಗದ ಅಧಿಕಾರಿ ಮೊನಾ ರೂತ್, ಪೊಳಲಿ ದೇವಳದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಸದಸ್ಯ ಯಶವಂತ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಮುಖ್ಯ ಶಿಕ್ಷಕ ಕೆ. ರಾಧಾಕೃಷ್ಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ ಡಿ ಎಂಸಿ ಕಾರ್ಯಾಧ್ಯಕ್ಷ ವೆಂಕಟೇಶ್ ನಾವಡ ಸ್ವಾಗತಿಸಿದರು. ಸಹಶಿಕ್ಷಕಿ ಉಮಾ ವಂದಿಸಿದರು. ಜಾನೆಟ್ ಲೋಬೊ ನಿರೂಪಿಸಿದರು.
Kshetra Samachara
27/11/2020 05:51 pm