ಮಂಗಳೂರು: ವೃದ್ಧರೊಬ್ಬರ ಭೂಮಿ ಖರೀದಿಸುತ್ತೇವೆಂದು ನಂಬಿಸಿ ನಕಲಿ ದಾಖಲೆ ಸೃಷ್ಟಿಸಿ ಕ್ರಯಪತ್ರ ಮಾಡಿ ಭೂಮಿ ಕಬಳಿಕೆಗೆ ಯತ್ನಿಸಿರುವ ಮಹಿಳೆ ಸಹಿತ ಇಬ್ಬರು ಆರೋಪಿಗಳನ್ನು ಸೈಬರ್ ಹಾಗೂ ಆರ್ಥಿಕ ಅಪರಾಧಗಳ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಮೂಲದ ಸದ್ಯ ಬಜ್ಪೆ ಬಳಿಯ ಕೊಂಪದವು ನಿವಾಸಿ ಕ್ರಿಸ್ಟಿನ್ ಎಡ್ವಿನ್ ಜೋಸೆಫ್ ಗೊನ್ಸಾಲ್ವಿಸ್ (84) ವಂಚನೆಗೊಳಾದ ವೃದ್ಧ. ನಕಲಿ ದಾಖಲೆ ಸೃಷ್ಟಿಸಿ, ನಕಲಿ ಸಹಿ ಹಾಕಿ ವಂಚಿಸಿ 77 ಸೆಂಟ್ಸ್ ಭೂಮಿಯನ್ನು ಕಬಳಿಸಲು ಯತ್ನಿಸಿದ್ದ ಆರೋಪದಲ್ಲಿ ಉಡುಪಿಯ ಅಶೋಕ್ ಕುಮಾರ್ ಹಾಗೂ ರೇಷ್ಮಾ ವಾಸುದೇವ ನಾಯಕ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಇನ್ನೋರ್ವ ಆರೋಪಿ ರಾಮ ಪೂಜಾರಿಯ ಬಂಧನ ಇನ್ನಷ್ಟೇ ಆಗಬೇಕಿದೆ.
ಸಂತ್ರಸ್ತ ವೃದ್ಧ ಕ್ರಿಸ್ಟಿನ್ ಎಡ್ವಿನ್ ಜೋಸೆಫ್ ಗೊನ್ಸಾಲ್ವಿಸ್ ಅವರಿಗೆ ಉಡುಪಿಯ ಮೂಡುತೋನ್ಸೆ ಬಳಿ 77 ಸೆಂಟ್ಸ್ ಭೂಮಿ ಇದೆ. ಅದನ್ನು ಅವರು ಮಾರಲು ಬಯಸಿದ್ದರು. ಇದನ್ನು ಅವರು ತಮ್ಮ ಪರಿಚಯದ ರಾಮ ಪೂಜಾರಿಗೆ ತಿಳಿಸಿದ್ದಾರೆ. ಆತ ಅಶೋಕ್ ಕುಮಾರ್, ರೇಷ್ಮಾ ವಾಸುದೇವ ನಾಯಕ್ ಎಂಬವರು ಭೂಮಿ ಖರೀದಿಸಲು ಆಸಕ್ತರಾಗಿದ್ದಾರೆಂದು ಹೇಳಿ ವ್ಯವಹಾರ ಕುದುರಿಸಿದ್ದಾನೆ.
ಈ ಬಗ್ಗೆ ಕರಾರು ಪತ್ರ ಮಾಡಲಾಗಿತ್ತು. ಈ ಸಂದರ್ಭ ಮುಂಗಡವಾಗಿ ಚೆಕ್ ಮೂಲಕ 30 ಲಕ್ಷ ರೂ. ನೀಡಿದ್ದು, ಉಳಿದ ಹಣವನ್ನು ಆರು ತಿಂಗಳ ಒಳಗೆ ಕೊಟ್ಟು ಕ್ರಯಪತ್ರ ಮಾಡುವುದಾಗಿ ತಿಳಿಸಿದ್ದರು. ಆದರೆ ಆರೋಪಿಗಳು ವೃದ್ಧ ಕ್ರಿಸ್ಟಿನ್ ಎಡ್ವಿನ್ ಜೋಸೆಫ್ ಗೊನ್ಸಾಲ್ವಿಸ್ ಅವರಿಗೆ ವಂಚಿಸಿ ಎಲ್ಲಾ 77 ಸೆಂಟ್ಸ್ ಗೆ ನಕಲಿ ದಾಖಲೆಪತ್ರ ನೀಡಿ ಕ್ರಯಪತ್ರ ಮಾಡಿಸಿದ್ದರು. ಅಲ್ಲದೆ 30 ಲಕ್ಷ ರೂ. ಚೆಕ್ ಕೂಡಾ ಬೌನ್ಸ್ ಆಗಿದೆಯೆಂದು ಸಂತ್ರಸ್ತ ವೃದ್ಧ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
Kshetra Samachara
07/05/2022 09:16 am