ಮುಲ್ಕಿ: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಕ್ಕಾರು ಹುಣಸೆಕಟ್ಟೆ ಬಳಿಯ ಕಪ್ಪು ಕಲ್ಲಿನ ಕೋರೆಯ ಬಳಿ ಮೂವರು ಅನ್ಯಕೋಮಿನ ವಿದ್ಯಾರ್ಥಿಗಳ ಜೊತೆ ಇಬ್ಬರು ವಿದ್ಯಾರ್ಥಿನಿಯರು ಪತ್ತೆಯಾಗಿದ್ದು, ಸ್ಥಳೀಯ ರಾಮಸೇನಾ ಕಾರ್ಯಕರ್ತರು ರೆಡ್ ಹ್ಯಾಂಡಾಗಿ ಹಿಡಿದು ಬಜಪೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಂಗಳೂರು ಮೂಲದ ಮೂವರು ಅನ್ಯಕೋಮಿನ ವಿದ್ಯಾರ್ಥಿಗಳು ಮಂಗಳೂರು ಮೂಲದ ಇಬ್ಬರು ವಿದ್ಯಾರ್ಥಿನಿಯರ ಜೊತೆ ಬಜಪೆ ಸಮೀಪದ ಎಕ್ಕಾರು ಹುಣಸೆಕಟ್ಟೆ ಬಳಿಯ ನೀರು ತುಂಬಿದ ಕಲ್ಲಿನ ಕೋರೆಯ ಕೆರೆಗೆ ಪೋಟೊ ಶೂಟ್ ಮಾಡಲು ಕಾರಿನಲ್ಲಿ ಬಂದಿದ್ದು, ಅಪಾಯಕಾರಿ ನೀರಿನಲ್ಲಿ ಚೆಲ್ಲಾಟವಾಡುತ್ತಿದ್ದರು ಎನ್ನಲಾಗಿದೆ.
ಈ ಸಂದರ್ಭ ಕಲ್ಲಿನ ಕೋರೆ ಬಳಿ ಅರೆನಗ್ನ ಸ್ಥಿತಿಯಲ್ಲಿದ್ದ ಅವರೆಲ್ಲ ಸ್ಥಳೀಯ ರಾಮ ಸೇನಾ ಶಿವಾಜಿ ಘಟಕದ ಕಾರ್ಯಕರ್ತರಿಗೆ ಸಿಕ್ಕಿ ಬಿದ್ದಿದ್ದು, ಬಜಪೆ ಠಾಣೆಗೆ ಹಸ್ತಾಂತರಿಸಲಾಗಿದೆ. ಪೊಲೀಸರು ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಹಾಗೂ ಕಾರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಎಕ್ಕಾರು ಕಲ್ಲಿನ ಕೋರೆ ಅಪಾಯಕಾರಿಯಾಗಿದ್ದು, ಕೆಲ ವರ್ಷಗಳ ಹಿಂದೆ ವಿದ್ಯಾರ್ಥಿಯೊಬ್ಬ ಈಜಾಡಲು ತೆರಳಿ ಮೃತಪಟ್ಟಿದ್ದ. ಆದರೂ ಸ್ಥಳೀಯ ಆಡಳಿತ ಕಲ್ಲಿನ ಕೋರೆಗೆ ಸೂಕ್ತ ತಡೆಬೇಲಿ ಅಳವಡಿಸದೆ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Kshetra Samachara
17/02/2021 09:14 pm