ಬಂಟ್ವಾಳ: ಜಿಲ್ಲೆಯಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣಗಳ ಐದು ಮಂದಿ ಆರೋಪಿಗಳನ್ನು ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಅವರ ವಿಶೇಷ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಗಳಾದ ಅರ್ಕುಳ ವಳಚ್ಚಿಳ್ ನಿವಾಸಿ ಅಮ್ಮಿ ಯಾನೆ ಅಮರುದ್ದೀನ್, ಮಂಗಳೂರು ಕಣ್ಣೂರು ನಿವಾಸಿಗಳಾದ ಮಹಮ್ಮದ್ ಯೂನಸ್ ಮತ್ತು ಹಫೀಜ್ ಯಾನೆ ಅಪ್ಪಿ, ಸಜಿಪಮೂಡ ಗ್ರಾಮದ ಪೆರ್ವ ನಿವಾಸಿ ಫಾರೂಕ್ ಯಾನೆ ಉಮ್ಮರ್ ಫಾರೂಕ್ ಯಾನೆ ಕಳ್ಳ ಫಾರೂಕ್ ಹಾಗೂ ಮಂಗಳೂರು ಬೆಂಗ್ರೆ ನಿವಾಸಿ ಮಹಮ್ಮದ್ ಸಫ್ವಾನ್ ಯಾನೆ ಸರತ್ ಯಾನೆ ಕರೂ ಯಾನೆ ಸರೂ ಯಾನೆ ಸಫ್ವಾನ್ ಎಂಬವರನ್ನು ಬಂಧಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ವಿಟ್ಲ, ಉಪ್ಪಿನಂಗಡಿ, ಪುತ್ತೂರು ಭಾಗದಲ್ಲಿ ಸರಣಿ ಕಳ್ಳತನಗಳು ಹೆಚ್ಚಿದ ಹಿನ್ನೆಲೆಯಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಅವರ ನೇತೃತ್ವದಲ್ಲಿ ಬಂಟ್ವಾಳ ನಗರ ಠಾಣೆ ಉಪನಿರೀಕ್ಷಕರಾದ ಅವಿನಾಶ್ ಮತ್ತು ಕಲೈಮಾರ್, ಬಂಟ್ವಾಳ ಗ್ರಾಮಾಂತರ ಠಾಣೆ ಉಪನಿರೀಕ್ಷಕರಾದ ಪ್ರಸನ್ನ ಮತ್ತು ಸಂಜೀವ್, ವಿಟ್ಲ ಠಾಣೆ ಉಪನಿರೀಕ್ಷಕರಾದ ವಿನೋದ್ ರೆಡ್ಡಿ, ಉಪ್ಪಿನಂಗಡಿ ಠಾಣೆ ಉಪನಿರೀಕ್ಷಕರಾದ ಈರಯ್ಯ , ಡಿಸಿಐಬಿ ಮತ್ತು ಠಾಣೆ ಸಿಬ್ಬಂದಿ ಒಳಗೊಂಡ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
ಬಂಟ್ವಾಳ ಸಹಾಯಕ ಅಧೀಕ್ಷಕ ವ್ಯಾಲೆಂಟಿನ್ ಡಿಸೋಜ ಮಾರ್ಗದರ್ಶನದಲ್ಲಿ ತನಿಖೆ ನಡೆಸಿ ಕೂಲಂಕಷವಾಗಿ ವಿಚಾರಿಸಿದಾಗ ಆರೋಪಿಗಳು ನಡೆಸಿದ ಹಲವು ಕೃತ್ಯಗಳು ಬೆಳಕಿಗೆ ಬಂದಿವೆ.
ಮೇಲ್ಕಾರ್ ಬಳಿಯ ಸುರಭಿ ಬಾರ್ ನಲ್ಲಿ ಕಳ್ಳತನ, ನರಿಕೊಂಬು ದೇವಸ್ಥಾನ ಹುಂಡಿ ಕಳವು, ಮೆಲ್ಕಾರ್ ಕಾಲೇಜ್ ನಲ್ಲಿ ಕಳ್ಳತನ, ವಿಟ್ಲದಲ್ಲಿ ಪೆಟ್ರೋಲ್ ಬಂಕ್ ಕಳ್ಳತನ ಪ್ರಕರಣ, ಅಮ್ಟೂರು ಚರ್ಚ್ ನಲ್ಲಿ ಕಳ್ಳತನ, ಬಿ.ಸಿ.ರೋಡಿನ ಚಂಡಿಕಾ ಪರಮೇಶ್ವರಿ ದೇವಸ್ಥಾನ ಹುಂಡಿ ಕಳ್ಳತನ, ಶಾಲೆಗಳಲ್ಲಿ ಕಳ್ಳತನ, ಪರ್ಲ ಚರ್ಚ್ ಕಳ್ಳತನ, ಬಿ.ಸಿ.ರೋಡಿನ ರಾಜೇಶ್ ಬಾರ್ ನಲ್ಲಿ ಕಳ್ಳತನ, ಮಂಗಳೂರಿನಲ್ಲಿ ಪಲ್ಸರ್ ಬೈಕ್ ಕಳ್ಳತನ, ಉಪ್ಪಿನಂಗಡಿಯ ಉಲ್ಲಾಸ್ ಬಾರ್ ನಲ್ಲಿ ಕಳ್ಳತನ, ಕೇರಳದ ಮಂಜೇಶ್ವರ, ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಲ್ಸರ್ ಬೈಕ್ ಕಳ್ಳತನ ಸೇರಿ ಒಟ್ಟು 13 ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.
ಆರೋಪಿಗಳಿಂದ 3 ಬೈಕ್ , ಒಂದು ಮೊಬೈಲ್, 6 ಡಿವಿಆರ್ ಸೆಟ್ ಬಾಕ್ಸ್ , 14 ಜೀವಂತ ಗುಂಡು, 2 ಮಾನಿಟರ್, ಬ್ರಾಡ್ ಬ್ಯಾಂಡ್ ಒ ಎಲ್ ಟಿ ಬಾಕ್ಸ್, 40,000 ಸಾವಿರ ನಗದು ಸೇರಿದಂತೆ ಒಟ್ಟು ಅಂದಾಜು 4,80,000 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿ ಕೊಳ್ಳಲಾಗಿದೆ.
Kshetra Samachara
05/02/2021 09:41 pm