ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಲಿಂಗಪ್ಪಯ್ಯಕಾಡು ಪ್ರಶಾಂತ್ ವೈನ್ಸ್ ಬಳಿ ಕ್ಷುಲ್ಲಕ ಕಾರಣಕ್ಕೆ ತಂಡವೊಂದು ಭಾನುವಾರ ಸಂಜೆ ವೇಳೆ ಕತ್ತಲಿನಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದೆ.
ಗಾಯಾಳು ಯುವಕನನ್ನು ಮುಲ್ಕಿ ಲಿಂಗಪ್ಪಯ್ಯಕಾಡು ಆಶ್ರಯ ಕಾಲೊನಿ ನಿವಾಸಿ ಮಲ್ಲಿಕಾರ್ಜುನ (26) ಎಂದು ಗುರುತಿಸಲಾಗಿದೆ. ಮಲ್ಲಿಕಾರ್ಜುನ ನಡೆದುಕೊಂಡು ಹೋಗುತ್ತಿರುವಾಗ ಆರೋಪಿಗಳು ಮದ್ಯ ಸೇವಿಸಿ ಕ್ಷುಲ್ಲಕ ಕಾರಣಕ್ಕೆ ತಗಾದೆ ತೆಗೆದು ಕಲ್ಲಿನಲ್ಲಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಕೂಡಲೇ ಸ್ಥಳದಲ್ಲಿ ಜನ ಗುಂಪು ಸೇರಲಾರಂಭಿಸಿದ್ದು, ಮುಲ್ಕಿ ಪೊಲೀಸರು ಸ್ಥಳಕ್ಕೆ ಧಾವಿಸಿ ಗುಂಪನ್ನು ಚದುರಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಹಲ್ಲೆಯಿಂದ ಗಂಭೀರ ಗಾಯಗೊಂಡ ಯುವಕ ಮುಲ್ಕಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಹಲ್ಲೆಗೆ ಸಂಬಂಧಿಸಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇತ್ತೀಚೆಗೆ ಇದೇ ವೈನ್ ಶಾಪ್ ಎದುರುಗಡೆ ಚೂರಿ ಇರಿತ ಹಾಗೂ ಹಲ್ಲೆ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇಲ್ಲಿ ತೆರೆದ ಸ್ಥಳಗಳಲ್ಲಿ ಸಾಮಾಜಿಕ ಅಂತರವಿಲ್ಲದೆ ಮದ್ಯ ಸೇವನೆ ಎಗ್ಗಿಲ್ಲದೆ ನಡೆಯುತ್ತಿದ್ದು, ಗಲಾಟೆಗೂ ಕಾರಣವಾಗುತ್ತಿದೆ. ಕೂಡಲೇ ಅಬಕಾರಿ ಮತ್ತು ಪೊಲೀಸ್ ಇಲಾಖೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ವೈನ್ ಶಾಪ್ ಗೆ ಮುತ್ತಿಗೆ ಹಾಕಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
Kshetra Samachara
08/11/2020 09:37 pm