ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಸಿಬಿ ಕಲೆಕ್ಷನ್ ಸೆಂಟರ್ ಎಂದಿದ್ದಕ್ಕೆ ವರ್ಗಾವಣೆ ಬೆದರಿಕೆ; ಯಾವುದಕ್ಕೂ ಜಗ್ಗಲ್ಲ ಎಂದು ಗುಡುಗಿದ ಹೈಕೋರ್ಟ್ ಜಡ್ಜ್

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಯು 'ಕಲೆಕ್ಷನ್ ಸೆಂಟರ್' ಆಗಿದೆ. ಎಸಿಬಿ ಭ್ರಷ್ಟಾಚಾರದ ಕೂಪವಾಗಿದೆ. ಅದರ ಮುಖ್ಯಸ್ಥರೇ ಕಳಂಕಿತ ವ್ಯಕ್ತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಅವರಿಗೆ ವರ್ಗಾವಣೆಯ ಬೆದರಿಕೆ ಹಾಕಲಾಗಿದೆ.

ಸೋಮವಾರ ಬೆಂಗಳೂರು ನಗರ ಡಿಸಿ ಕಚೇರಿಯ ಭ್ರಷ್ಟಾಚಾರ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಅವರೇ ಈ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಜೊತೆಗೆ ವರ್ಗಾವಣೆ ಬೆದರಿಕೆಗೆ ಹೆದರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

'ನನಗೆ ವರ್ಗಾವಣೆಯ ಪರೋಕ್ಷ ಬೆದರಿಕೆ ಹಾಕಲಾಗಿದೆ. ನಾನೀಗ ನ್ಯಾಯಾಂಗದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಬೇಕಿದೆ. ಜಡ್ಜ್ ಆದ ಮೇಲೆ ನಾನು ಒಂದಿಂಚೂ ಆಸ್ತಿ ಮಾಡಿಲ್ಲ. ವರ್ಗಾವಣೆ ಬೆದರಿಕೆ ಎದುರಿಸುತ್ತೇನೆ. ಜನರ ಒಳಿತಿಗಾಗಿ ವರ್ಗಾವಣೆಯಾಗಲು ಸಿದ್ಧನಿದ್ದೇನೆ. ನನಗೆ 500 ರೂಪಾಯಿಯಲ್ಲಿ ಜೀವನ ಮಾಡಿಯೂ ಗೊತ್ತು, 5,000 ರೂ.ನಲ್ಲಿ ಜೀವನ ಮಾಡಿಯೂ ಗೊತ್ತು. ಯಾರ ಹೆದರಿಕೆಯೂ ಇಲ್ಲ, ಬೆಕ್ಕಿಗೆ ಗಂಟೆ ಕಟ್ಟಲು ಸಿದ್ಧನಿದ್ದೇನೆ. ಇವತ್ತು ಭ್ರಷ್ಟಾಚಾರ ಸಮಾಜದಲ್ಲಿ ಕ್ಯಾನ್ಸರ್‌ ಆಗಿ ಪರಿಣಮಿಸಿದೆ’ ಎಂದು ಗುಡುಗಿದರು.

ಬೆಳಗಿನ ಕಲಾಪದಲ್ಲಿ ತಾವು ಹೇಳಿದಂತೆ ಎಲ್ಲವನ್ನೂ ಮಧ್ಯಾಹ್ನದ ಕಲಾಪದಲ್ಲಿ ಆದೇಶದಲ್ಲಿ ಬರೆಯಿಸಲು ಮುಂದಾಗುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ನಾವದಗಿ, ‘ತಾವು ಎಲ್ಲವನ್ನೂ ಆದೇಶದಲ್ಲಿ ಕಾಣಿಸುವ ಅವಶ್ಯಕತೆ ಇಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲುಪ್ತವಾಗಿ ನಿರ್ದೇಶನ ನೀಡಿದರೆ ಸಾಕು’ ಎಂದು ಮನವಿ ಮಾಡಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಮೂರ್ತಿಗಳು, ಜಿಲ್ಲಾಧಿಕಾರಿ ಮಂಜುನಾಥ್‌ ಅವರ ಸೇವಾ ದಾಖಲೆಯನ್ನು ಹಾಜರುಪಡಿಸುವಂತೆ ನಿರ್ದೇಶಿಸಿ ವಿಚಾರಣೆಯನ್ನು ಇದೇ 7ಕ್ಕೆ ಮುಂದೂಡಿದರು. ಆನೇಕಲ್‌ ತಾಲ್ಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದ ವ್ಯಾಜ್ಯದಲ್ಲಿ ಅನುಕೂಲಕರ ಆದೇಶ ನೀಡಲು ಬೇಗೂರು ನಿವಾಸಿ ಅಜಂ ಪಾಷಾ ಎಂಬುವರಿಂದ 5 ಲಕ್ಷ ಲಂಚ ಪಡೆಯಲಾಗಿದೆ ಎಂಬ ಪ್ರಕರಣದಲ್ಲಿ ಅರ್ಜಿದಾರ ಮಹೇಶ್‌ ಆರೋಪಿಯಾಗಿದ್ದಾರೆ. ಎಸಿಬಿ ಪರ ಪಿ.ಎನ್‌.ಮನಮೋಹನ್‌ ಮತ್ತು ಅರ್ಜಿದಾರ ಮಹೇಶ್‌ ಪರ ಹಿರಿಯ ವಕೀಲ ಎ.ಎಸ್‌.ಪೊನ್ನಣ್ಣ ಹಾಜರಾಗಿದ್ದರು.

ಹಳೆಯ ಪ್ರಕರಣವೊಂದನ್ನು ಪ್ರಸ್ತಾಪಿಸಿದ ಸಂದೇಶ್, ‘ಐಎಎಸ್ ಅಧಿಕಾರಿ ಮನೆ ಮೇಲಿನ ದಾಳಿಯಲ್ಲಿ ನಾಲ್ಕೂವರೆ ಕೋಟಿ ಹಣ ಸಿಗುತ್ತದೆ. 5 ಕೆಜಿ ಚಿನ್ನ ಸಿಗುತ್ತದೆ. ಕೇಸಿನಲ್ಲಿ ಬಿ ರಿಪೋರ್ಟ್ ಹಾಕಿದಾಗ, ಬಿ ರಿಪೋರ್ಟ್ ಹಾಕಿದ್ದೇಕೆ ಎಂದು ಪ್ರಶ್ನಿಸಿದ ನ್ಯಾಯಾಧೀಶರು ವರ್ಗಾವಣೆಯಾಗುತ್ತಾರೆ. ಮತ್ತೊಬ್ಬ ನ್ಯಾಯಾಧೀಶರು ಬಂದ ಮೇಲೆ ಬಿ ರಿಪೋರ್ಟ್ ಅಂಗೀಕೃತವಾಗುತ್ತದೆ. ಇಂತಹ ಘಟನೆಗಳು ನೋವು ತರಿಸುತ್ತವೆ. ರೆಡ್ ಹ್ಯಾಂಡ್ ಆಗಿ ಲಂಚ ಸಮೇತ ಸಿಕ್ಕಿಬಿದ್ದಿದ್ದರೂ ಬಿ ರಿಪೋರ್ಟ್ ಹೇಗೆ ಹಾಕುತ್ತಾರೆ. ಸರ್ಚ್ ವಾರೆಂಟ್ ತೆಗೆದುಕೊಂಡರೂ ಸರ್ಚ್ ಮಾಡುವುದಿಲ್ಲ. ಸರ್ಚ್ ವಾರೆಂಟ್ ತೋರಿಸಿಯೇ ವಸೂಲಿ ಮಾಡುತ್ತಾರೆ' ಎಂದು ಕಿಡಿಕಾರಿದರು.

‘ರಾಜ್ಯದಲ್ಲಿ ಏನು ನಡೆಯುತ್ತಿದೆ. ಅಡ್ವೊಕೇಟ್ ಜನರಲ್ ಅವರೇ, ಜಿಲ್ಲಾಧಿಕಾರಿ ಕಚೇರಿಯಲ್ಲಿ ದುಡ್ಡು ಕಲೆಕ್ಷನ್ ಮಾಡಲು ಖಾಸಗಿ ವ್ಯಕ್ತಿಯನ್ನು ನೇಮಿಸಿಕೊಳ್ಳಲಾಗುತ್ತದೆ. ಖಾಸಗಿ ಪಿಎ ಡಿಸಿ ಹತ್ರ ಎಲ್ಲ ಮಾಡಿಸಿಕೊಡುತ್ತೇನೆ ಎಂದರೆ ಅದರರ್ಥ ಏನು? ಇವೆಲ್ಲಾ ಸಂಭಾಷಣೆ ಫೋನ್‌ನಲ್ಲಿ ರೆಕಾರ್ಡ್ ಆಗಿವೆ. ಡಿಸಿ ಒಪ್ಪಿಗೆ ಇಲ್ಲದೆಯೇ ಆತ 5 ಲಕ್ಷ ರೂ. ಲಂಚ ಪಡೆಯಲು ಸಾಧ್ಯವೇ. ಬೇಲಿಯೇ ಎದ್ದು ಹೊಲ ಮೇಯುತ್ತಿದೆಯಲ್ಲವೇ’ ಎಂದು ಸಂದೇಶ್ ಪ್ರಶ್ನಿಸಿದರು.

Edited By : Vijay Kumar
PublicNext

PublicNext

05/07/2022 12:38 pm

Cinque Terre

106.09 K

Cinque Terre

6

ಸಂಬಂಧಿತ ಸುದ್ದಿ