ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಕೀಲೆ ಜೀವಾ ಆತ್ಮಹತ್ಯೆ ಕೇಸ್‌: ಬಂಧಿಸದಂತೆ ಡಿವೈಎಸ್ಪಿ ಕನಕಲಕ್ಷ್ಮೀ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಬೆಂಗಳೂರು: ಕಳೆದ ತಿಂಗಳು ಆತ್ಮಹತ್ಯೆಗೆ ಶರಣಾಗಿದ್ದ ವಕೀಲೆ ಎಸ್. ಜೀವಾಳಿಗೆ 25 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಹಾಗೂ ಕಿರುಕುಳ ನೀಡಿದ ಪ್ರಕರಣದಲ್ಲಿ ತಮ್ಮನ್ನ ಬಂಧಿಸದಂತೆ ಡಿವೈಎಸ್ಪಿ ಕನಕಲಕ್ಷ್ಮೀ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಅರ್ಜಿ ವಿಚಾರಣೆ ನಡೆಸಿ 23ನೇ ಸಿಸಿಎಚ್ ನ್ಯಾಯಾಲಯ ನ್ಯಾಯಮೂರ್ತಿ ಕೆ.ಎಂ.ರಾಧಾಕೃಷ್ಣ ಅವರಿದ್ದ ಪೀಠವು ಸಲ್ಲಿಸಲಾಗಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಭೋವಿ ನಿಗಮದಲ್ಲಿ ಫಲಾನುಭವಿಗಳ ಸೋಗಿನಲ್ಲಿ ಕೋಟ್ಯಂತರ ಸಾಲ ಪಡೆದ ಅವ್ಯವಹಾರ ಸಂಬಂಧ ಕಳೆದ ಎರಡು ವರ್ಷಗಳಿಂದ ಸಿಐಡಿಯು ಪ್ರತ್ಯೇಕ ನಾಲ್ಕು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಪ್ರಕರಣವೊಂದರಲ್ಲಿ ತನಿಖಾಧಿಕಾರಿಯಾಗಿದ್ದ ಸಿಐಡಿಯ ಡಿವೈಎಸ್ಪಿ ಕನಕಲಕ್ಷ್ಮೀ ಅವರು ವಿಚಾರಣೆ ನೆಪದಲ್ಲಿ ವಕೀಲೆ ಎಸ್ ಜೀವಾ ಅವರಿಗೆ 25 ಲಕ್ಷ ಹಣ ಬೇಡಿಕೆಯಿಟ್ಟು ಮಾನಸಿಕ ಕಿರುಕುಳ ನೀಡಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ಜೀವಾ ಅವರು ನವೆಂಬರ್‌ 22ರಂದು ಸ್ವಗೃಹದಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದರು. ಡೆತ್ ನೋಟ್‌ನಲ್ಲಿ ಡಿವೈಎಸ್ಪಿ ಹೆಸರು ಉಲ್ಲೇಖಿಸಿದ್ದರು. ಈ ಸಂಬಂಧ ಮೃತಳ ಸಹೋದರಿ ನೀಡಿದ ದೂರು ಆಧರಿಸಿ ಬನಶಂಕರಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಸಿಸಿಬಿಗೆ ವರ್ಗಾಯಿಸಿದ್ದರು.

ಮತ್ತೊಂದೆಡೆ ಸಿಬಿಐ ತನಿಖೆ ಕೋರಿ ವಕೀಲರ ಸಂಘ ಸಲ್ಲಿಸಿದ್ದ ಅರ್ಜಿ ಸಂಬಂಧ ವಿಚಾರಣೆ ನಡೆಸಿದ್ದ ಹೈಕೋರ್ಟ್ ಪ್ರತ್ಯೇಕ ಎಸ್‌ಐಟಿ ರಚಿಸಿತ್ತು. ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಬೆಂಗಳೂರು ಸಿಬಿಐನ ಪೊಲೀಸ್‌ ವರಿಷ್ಠಾಧಿಕಾರಿ ವಿನಾಯಕ್ ವರ್ಮಾ, ಕರ್ನಾಟಕ ಹೋಮ್‌ ಗಾರ್ಡ್‌ನ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್ ಮಚೀಂದ್ರ ಹಾಗೂ ಆಂತರಿಕ ಭದ್ರತಾ ವಿಭಾಗದ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಸೇರಿದಂತೆ ಮೂವರು ಅಧಿಕಾರಿಗಳ ವಿಶೇಷ ತಂಡ ತನಿಖೆ ನಡೆಸುತ್ತಿದೆ. ನಿರೀಕ್ಷಣಾ ಜಾಮೀನು ಅರ್ಜಿ ವಜಾ ಹಿನ್ನೆಲೆಯಲ್ಲಿ ಕನಕಲಕ್ಷ್ಮೀ ಅವರನ್ನ ಬಂಧಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Edited By : Vijay Kumar
PublicNext

PublicNext

11/12/2024 09:23 pm

Cinque Terre

25.82 K

Cinque Terre

0