ಕಾರವಾರ: ಮೀನು ಸಾಗಿಸುವ ಲಾರಿಯಲ್ಲಿ 9 ಲಕ್ಷ ರೂ.ಮೌಲ್ಯದ ಅಕ್ರಮ ಗೋವಾ ಮದ್ಯ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಅಬಕಾರಿ ಸಿಬ್ಬಂದಿ ಲಾರಿ ಸಹಿತ ಓರ್ವನನ್ನು ವಶಕ್ಕೆ ಪಡೆದಿರುವ ಘಟನೆ ಕಾರವಾರದ ಮಾಜಾಳಿ ಗೇಟ್ ಬಳಿ ನಡೆದಿದೆ.
ಗೋವಾದಿಂದ ಆಗಮಿಸಿದ ಮೀನಿನ ಲಾರಿಯಲ್ಲಿ 300 ಕ್ಕೂ ಹೆಚ್ಚು ಖಾಲಿ ಟ್ರೇ ಗಳು ಇರುವುದನ್ನು ಕಂಡು ಅನುಮಾನಗೊಂಡ ಅಬಕಾರಿ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಟ್ರೇಗಳ ಮಧ್ಯೆ ಸುಮಾರು 505 ಲೀಟರ್‍ನ 9.13 ಲಕ್ಷ ಮೌಲ್ಯದ ಗೋವಾ ಮದ್ಯ ಪತ್ತೆಯಾಗಿದೆ. ಚಾಲಕ ಆಂಧ್ರಪ್ರದೇಶ ಮೂಲದ ಸೂರ್ಯನಾರಾಯಣ ಮೂರ್ತಿ ಎಂದು ಗುರುತಿಸಲಾಗಿದೆ. ಈತನ ಸಹಿತ ಗೋವಾ ಮದ್ಯವನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ.
ಸಾಗಾಟಕ್ಕೆ ಬಳಸಿದ್ದ 16 ಲಕ್ಷ ಮೌಲ್ಯದ ಕಂಟೇನರ್ ಲಾರಿ, 90 ಸಾವಿರ ಮೌಲ್ಯದ ಪ್ಲಾಸ್ಟಿಕ್ ಟ್ರೇ ಸೇರಿ 25 ಲಕ್ಷ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆದು ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
PublicNext
16/02/2021 04:34 pm