ವಾಷಿಂಗ್ಟನ್: ಮುಂದಿನ ದಿನಗಳಲ್ಲಿ ಉಕ್ರೇನ್ ಮೇಲೆ ರಷ್ಯಾ ದಾಳಿ ಸಾಧ್ಯತೆ ಹೆಚ್ಚಾಗಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.
ಶ್ವೇತಭವನದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಉಕ್ರೇನ್‌ನಲ್ಲಿರುವ ತನ್ನ ಸೈನ್ಯವನ್ನು ರಷ್ಯಾ ಸ್ಥಳಾಂತರಿಸಿಲ್ಲ. ಹೊರತಾಗಿ ಹೆಚ್ಚಿನ ಸೈನ್ಯವನ್ನು ಗಡಿ ಪ್ರದೇಶದಲ್ಲಿ ನಿಯೋಜನೆ ಮಾಡುತ್ತಿದೆ. ಈ ಮೂಲಕ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಲು ಎಲ್ಲ ರೀತಿಯ ಸಿದ್ಧತೆ ನಡೆಸುತ್ತಿದೆ ಎನ್ನುವ ಮಾಹಿತಿ ನಮಗೆ ಲಭಿಸಿದೆ. ನನ್ನ ವಿವೇಚನೆ ಪ್ರಕಾರ ಮುಂದಿನ ಕೆಲವೇ ದಿನಗಳಲ್ಲಿ ಈ ದಾಳಿ ಸಂಭವಿಸಲಿದೆ' ಎಂದು ತಿಳಿಸಿದ್ದಾರೆ.
ಆದರೆ ಇದಕ್ಕೂ ಮುನ್ನ ಪ್ರತಿಕ್ರಿಯೆ ನೀಡಿದ್ದ ರಷ್ಯಾ, ಉಕ್ರೇನ್ ಮೇಲೆ ಯಾವುದೇ ದಾಳಿ ನಡೆಸಲು ನಾವು ಯೋಜನೆ ರೂಪಿಸಿಲ್ಲ ಎಂದು ಹೇಳಿದೆ. ಉಕ್ರೇನ್-ರಷ್ಯಾ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವಂತೆಯೇ ಇತ್ತ ನ್ಯಾಟೋ ಪಡೆಗಳ ಹೆಚ್ಚಿನ ಘಟಕಗಳು ಸೋಮವಾರ (ಫೆ.14ರಂದು) ಪೂರ್ವ ಯುರೋಪ್ ಅನ್ನು ತಲುಪಿವೆ.
PublicNext
17/02/2022 09:46 pm