ಅರಿಜೋನಾ: ಅಮೆರಿಕದ ಅರಿಜೋನಾದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕ ಬ್ರಾಂಡನ್ ಸೌಲ್ಸ್(19)ಗೆ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇರುವ ಮನಸ್ಸಾಯಿತಂತೆ. ಆದರೆ ಮೇಲಧಿಕಾರಿಯನ್ನು ಕೇಳಿದರೆ ಅವರು ಒಪ್ಪುವುದಿಲ್ಲ ಎಂದು ಅರಿತ ಆತ ಬೇರೆಯದ್ದೇ ಪ್ಲ್ಯಾನ್ ಮಾಡಿದ್ದಾನೆ.
ತನ್ನ ಬಾಯಿಗೆ ಬಟ್ಟೆ ತುಂಬಿಕೊಂಡು ನಗರದ ಹತ್ತಿರದ ಸ್ಥಳವೊಂದರಲ್ಲಿ ರಸ್ತೆಗೆ ಕಾಣುವಂತೆ ಕೈಗೆ ಬೆಲ್ಟ್ ನಿಂದ ಕಟ್ಟಿಕೊಂಡು ಬಿದ್ದಿದ್ದಾನೆ. ಅದನ್ನು ಕಂಡ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರಿಗೆ ಆತ ಯಾರೋ ಇಬ್ಬರು ತನ್ನನ್ನು ಕಿಡ್ನಾಪ್ ಮಾಡಿದ್ದಾಗಿ ಹೇಳಿದ್ದಾನೆ. ನನ್ನ ತಂದೆ ನಿಧಿ ಇಟ್ಟಿದ್ದಾರೆಂದು ಅವರು ನನ್ನನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಸುಳ್ಳು ಕಥೆ ಹೇಳಿದ್ದಾನೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ಎಲ್ಲೂ ಕೂಡ ಇದಕ್ಕೆ ಸಂಬಂಧ ಪಟ್ಟ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ನಂತರ ಸರಿಯಾದ ರೀತಿಯಲ್ಲಿ ಆತನನ್ನು ವಿಚಾರಣೆ ನಡೆಸಿದಾಗ ಆತ ತಾನು ಸುಳ್ಳು ಕಥೆ ಹೆಣೆದಿದ್ದಾಗಿ ಒಪ್ಪಿಕೊಂಡಿದ್ದಾನೆ. ಇದೀಗ ಆತನ ವಿರುದ್ಧ ಸುಳ್ಳು ಮಾಹಿತಿ ಪ್ರಕರಣ ದಾಖಲಾಗಿದೆ. ಅದರ ಜತೆಯಲ್ಲಿ ಕೆಲಸದಿಂದಲೂ ತೆಗೆದುಹಾಕಲಾಗಿದೆ.
PublicNext
23/02/2021 06:48 pm