ವಾಷಿಂಗ್ಟನ್: ನಾಸಾದ ಪರ್ಸೆವೆರೆನ್ಸ್ ರೋವರ್ ಯಶಸ್ವಿಯಾಗಿ ಮಂಗಳನ ನೆಲ ಸ್ಪರ್ಶಿಸಿದ್ದು, ಈ ಯೋಜನೆಯ ಮಾರ್ಗದರ್ಶನ, ಪಥದರ್ಶಕ ಮತ್ತು ನಿಯಂತ್ರಣ ಕಾರ್ಯಾಚರಣೆಗಳ (ಜಿಎನ್ ಮತ್ತು ಸಿ) ನೇತೃತ್ವ ವಹಿಸಿದವರು ಭಾರತ ಮೂಲದ ವಿಜ್ಞಾನಿ ಸ್ವಾತಿ ಮೋಹನ್!
ಫ್ಲೋರಿಡಾದ ಕೇಪ್ ಕ್ಯಾನವೆರಲ್ ನಿಂದ ಈ ಬಾಹ್ಯಾಕಾಶ ನೌಕೆಯು ಉಡಾವಣೆಗೊಂಡಿತ್ತು. 472 ಮಿಲಿಯನ್ ಕಿ.ಮೀ. ದೂರ ಸಾಗಿ ಮಂಗಳ ಗ್ರಹವನ್ನು ಯಶಸ್ವಿಯಾಗಿ ಸ್ಪರ್ಶಿಸಿದೆ.
ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ ನ (NASA) ಅತಿದೊಡ್ಡ ಹಾಗೂ ಅತ್ಯಾಧುನಿಕ ಪರ್ಸೆವೆರೆನ್ಸ್ ರೋವರ್ (Perseverance Rover), ಬಾಹ್ಯಾಕಾಶ ನೌಕೆ ನಾಸಾ ರೋವರ್ ಮಂಗಳ ಗ್ರಹದ ಮೇಲೆ ಕಾಲಿರಿಸಿದೆ.
ಇದು ನಾಸಾದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದ್ದು, ಮಂಗಳ ಗ್ರಹದಲ್ಲಿ ಜೀವಗಳ ಇರುವಿಕೆಯ ಕುರುಹು ಹುಡುಕಲಿದೆ. ಅಧಿಕೃತ ಮಾಹಿತಿಯಂತೆ ಮಂಗಳ ಗ್ರಹದಿಂದ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ಹಿಂದಿರುಗಿಸುವ ಯೋಜನೆಯನ್ನು ನಾಸಾ ಹೊಂದಿದೆ. ಮಂಗಳಯಾನವನ್ನು ಯಶಸ್ವಿಯಾಗಿಸಿದ ನಾಸಾ ವಿಜ್ಞಾನಿಗಳ ತಂಡದಲ್ಲಿದ್ದ ಭಾರತೀಯ ಮೂಲದ ಸದಸ್ಯೆ ಡಾ. ಸ್ವಾತಿ ಮೋಹನ್.
ರೋವರ್ ನ ಆ್ಯಲ್ಟಿಟ್ಯೂಡ್ (Altitude) ಕಂಟ್ರೋಲ್ ಹಾಗೂ ಲ್ಯಾಂಡಿಂಗ್ ಸಿಸ್ಟಮ್ನ ಅಭಿವೃದ್ಧಿಯಲ್ಲಿ ಮುಂಚೂಣಿಯ ಪಾತ್ರ ವಹಿಸಿದವರು ಡಾ. ಸ್ವಾತಿ. ಮೋಹನ್ ಗೆ ಭಾರತದಾದ್ಯಂತ ಅಪಾರ ಶ್ಲಾಘನೆ ವ್ಯಕ್ತವಾಗುತ್ತಿದೆ. ದೇಶವೇ ಹೆಮ್ಮೆ ಪಡುವ ಸಾಧನೆಯನ್ನು ಅವರು ನಾಸಾ ತಂಡದಲ್ಲಿ ಮಾಡಿದ್ದಾರೆ ಎಂದು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ.
PublicNext
20/02/2021 07:34 am