ಕೈವ್ (ಉಕ್ರೇನ್): ಉಕ್ರೇನ್ ವಾಯುಪಡೆಯ ವಿಮಾನವು ಪತನವಾಗಿ ಮಿಲಿಟರಿ ಸಿಬ್ಬಂದಿ ಸೇರಿದಂತೆ ಕನಿಷ್ಠ 22 ಮಂದಿ ಸಾವನ್ನಪ್ಪಿದ ಭಾರೀ ದುರಂತವು ಕೈವ್ ಪೂರ್ವದ ಖಾರ್ಕಿವ್ ಬಳಿ ಸಂಭವಿಸಿದೆ. ಈ ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೈವ್ ದೇಶದ ಉಪ ಆಂತರಿಕ ಸಚಿವ, "ವಿಮಾನ ಪತನವು ಆಘಾತವನ್ನು ಉಂಟುಮಾಡಿದೆ. ಈ ದುರ್ಘಟನೆಯಲ್ಲಿ 22 ಮಂದಿ ಮೃತಪಟ್ಟಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆ ದಾಖಲಿಸಲಾಗಿದೆ. ಉಳಿದವರಿಗಾಗಿ ಹುಡುಕಾಟ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಪತನವಾದ ಆಂಟೊನೊವ್ -26 ಸಾರಿಗೆ ವಿಮಾನದಲ್ಲಿ ಒಟ್ಟು 28 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಇದರಲ್ಲಿ 21 ಮಿಲಿಟರಿ ವಿದ್ಯಾರ್ಥಿಗಳು ಮತ್ತು ಏಳು ಸಿಬ್ಬಂದಿ ಇದ್ದರು. ಖಾರ್ಕಿವ್ ರಾಷ್ಟ್ರೀಯ ವಾಯುಪಡೆಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ವಾಯುಪಡೆ ಮಾಹಿತಿ ನೀಡಿದೆ.
ಉಕ್ರೇನ್ ರಾಜಧಾನಿ ಕೈವ್‍ನಿಂದ ಸುಮಾರು 400 ಕಿ.ಮೀ. ದೂರವಿರುವ ಚುಹುಯಿವ್ ವಿಮಾಣ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ವೇಳೆ ಈ ಅವಘಡ ಸಂಭವಿಸಿದೆ. ಮಾಹಿತಿ ತಿಳಿದು ಸ್ಥಳಕ್ಕೆ ರಕ್ಷಣಾ ಪಡೆ ಹಾಗೂ ಅಗ್ನಿಶಾಮಕ ದಳ ದೌಡಾಯಿಸಿದ್ದು, ಒಂದು ಗಂಟೆಯ ನಂತರ ಬೆಂಕಿಯನ್ನು ನಂದಿಸಿದ್ದಾರೆ.
PublicNext
27/09/2020 02:40 pm