ಮುಂಬೈ:ಲಾಕ್‍ಡೌನ್ ಕಾರಣದಿಂದ ಕೆಲಸ ಕಳೆದುಕೊಂಡ ತಾಯಿಯ ನೆರವಿಗೆ ಬಂದ 14 ಬಾಲಕ ಟೀ ಮಾರಾಟ ಮಾಡಲು ಆರಂಭಿಸಿದ್ದಾನೆ. ಇದರಿಂದಲೇ ತನ್ನಿಬ್ಬರೂ ಸಹೋದರಿಯರ ಶಿಕ್ಷಣಕ್ಕೆ ನೆರವಾಗಿದ್ದಾನೆ.
ಮುಂಬೈನ ಭೆಂಡಿ ಬಜಾರ್ ಪ್ರದೇಶದ ಅಂಗಡಿಯಲ್ಲಿ ಚಹಾ ತಯಾರಿಸುವ ಬಾಲಕ ಸುಭಾನ್, ಪ್ರತಿದಿನ ಹತ್ತಿರದ ಪ್ರದೇಶಗಳಲ್ಲಿ ಟೀ ಮಾರಾಟ ಮಾಡುತ್ತಾನೆ. ಬಾಲಕನಿಗೆ ಯಾವುದೇ ಟೀ ಅಂಗಡಿ ಇಲ್ಲದ ಕಾರಣ ಆತ ಜನರ ಬಳಿಯೇ ತೆರಳಿ ಟೀ ಮಾರಾಟ ಮಾಡುತ್ತಿದ್ದಾನೆ. ತನ್ನ ಕುಟುಂಬದ ಕುರಿತು ಮಾತನಾಡಿರುವ ಬಾಲಕ, ನನ್ನ ತಾಯಿ ಶಾಲಾ ಬಸ್ಸಿನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಈಗ ಶಾಲೆಗಳು ಮುಚ್ಚಿರುವುದರಿಂದ ಇದ್ದ ಕೆಲಸವೂ ಹೋಗಿದೆ. ಇದರಿಂದ ನಾವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಭೆಂಡಿ ಬಜಾರ್ ಅಂಗಡಿಯಲ್ಲಿ ಚಹಾ ಮಾಡುತ್ತೇನೆ. ನಾಗಪಾಡ, ಭೆಂಡಿ ಬಜಾರ್ ಪ್ರದೇಶಗಳಲ್ಲಿ ಮಾರಾಟ ಮಾಡುತ್ತೇನೆ. ದಿನಕ್ಕೆ 300-400 ರೂ. ಗಳಿಸುತ್ತೇನೆ. ಗಳಿಸಿದ್ದನ್ನು ನನ್ನ ತಾಯಿಗೆ ಕೊಡುತ್ತೇನೆ ಎಂದು ತಿಳಿಸಿದ್ದಾನೆ.
ನನ್ನ ಸಹೋದರಿಯರು ಆನ್‍ಲೈನ್ ಮೂಲಕ ಶಿಕ್ಷಣ ಮುಂದುವರಿಸಿದ್ದಾರೆ. ನಾನು ಶಾಲೆಗಳು ಪುನರ್ ಆರಂಭವಾದ ಬಳಿಕ ಶಿಕ್ಷಣವನ್ನು ಮುಂದುವರಿಸುತ್ತೇನೆ ಎಂದು ಸುಭಾನ್ ಹೇಳಿದ್ದಾನೆ. ಸುಭಾನ್ ತಂದೆ 12 ವರ್ಷಗಳ ಹಿಂದೆ ಸಾವನ್ನಪ್ಪಿದ್ದಾರೆ. ಅಂದಿನಿಂದಲೇ ಆತನ ತಾಯಿ ಕುಟುಂಬ ನಡೆಸಿಕೊಂಡು ಬರುತ್ತಿದ್ದರು. ಸದ್ಯ ಶಾಲೆಗಳು ಮುಚ್ಚಿರುವ ಕಾರಣ ಕೆಲಸವಿಲ್ಲದಂತಾಗಿದ್ದಾರೆ.
PublicNext
30/10/2020 07:37 pm