ಮೈಸೂರು: ಕೇಂದ್ರ ಸರ್ಕಾರವು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ವಾಹನ ಸವಾರರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ಹೆದ್ದಾರಿ ನಡುವೆ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಮೈಸೂರು ನಗರದ ಮಣಿಪಾಲ್ ಆಸ್ಪತ್ರೆ ಜಂಕ್ಷನ್‌ನಲ್ಲಿ ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತದೆ.
ಈ ಸಂಬಂಧ ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ‘ಹೊರವಲಯದ ಮಣಿಪಾಲ್ ಆಸ್ಪತ್ರೆ ಸಮೀಪದ ಹೆದ್ದಾರಿಯಲ್ಲಿ ಫ್ಲೈಓವರ್ ನಿರ್ಮಾಣ ಮತ್ತು ರೈಲ್ವೆ ಸೇತುವೆಗಳ ನಿರ್ಮಾಣದ ಯೋಜನೆ ಇದಾಗಿದೆ. ಆ ಜಂಕ್ಷನ್‌ನಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದ್ದು, ಫ್ಲೈಓವರ್ ನಿರ್ಮಾಣಕ್ಕೆ ಜನರಿಂದ ಒತ್ತಾಯ ಕೇಳಿಬಂದಿತ್ತು. ಅದಕ್ಕೆ ಸ್ಪಂದಿಸಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.
‘ಟೆಂಡರ್ ಪ್ರಕ್ರಿಯೆ ಹಂತದಲ್ಲಿದ್ದು, 6 ತಿಂಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. 711 ಕೋಟಿ ರೂಪಾಯಿ ಪ್ಯಾಕೇಜ್‌ನಲ್ಲಿ ಬಿಡದಿ, ಚನ್ನಪಟ್ಟಣ ಮತ್ತು ಮಂಡ್ಯದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯೂ ಒಳಗೊಂಡಿದೆ. ಇದರಿಂದ ರೈಲುಗಳ ಸುಗಮ ಸಂಚಾರ ಹಾಗೂ ಆ ಭಾಗದ ಹಳ್ಳಿಗಳ ಜನರ ತಡೆರಹಿತ ಓಡಾಟಕ್ಕೆ ಅನುಕೂಲವಾಗಲಿದೆ’ ಎಂದರು.
‘ಈ ಹೆದ್ದಾರಿಯಲ್ಲಿ ಮಂಡ್ಯ ಜಿಲ್ಲೆಯ ಗಣಂಗೂರು, ರಾಮನಗರ ಜಿಲ್ಲೆಯ ಶೇಷಗಿರಿಹಳ್ಳಿ, ಬೆಂಗಳೂರಿನ ಕಣಮಿಣಕಿಯಲ್ಲಿ ಟೋಲ್‌ಗಳಿವೆ. 28 ಕಡೆ ಪ್ರವೇಶ ಮತ್ತು ನಿರ್ಗಮನಕ್ಕೆ ಅವಕಾಶವಿದೆ. ಹೆದ್ದಾರಿಯಲ್ಲಿ ಸಂಚರಿಸಿದ ಕಿಲೋ ಮೀಟರ್‌ಗಳಿಗೆ ಮಾತ್ರವೇ ಟೋಲ್ ಕಟ್ಟಬೇಕಾಗುತ್ತದೆ’ ಎಂದು ತಿಳಿಸಿದರು.
ವಿಮಾನನಿಲ್ದಾಣ ರನ್‌ವೇ ವಿಸ್ತರಣೆ: ಮೈಸೂರು ವಿಮಾನನಿಲ್ದಾಣ ಅಭಿವೃದ್ಧಿ, ರನ್ ವೇ ವಿಸ್ತರಣೆ ಮತ್ತು ವಿಮಾನಗಳ ಹಾರಾಟ ಬಗ್ಗೆ ಸಂಬಂಧಪಟ್ಟ ಇಲಾಖೆಯೊಂದಿಗೆ ನಿರಂತರ ಪ್ರಯತ್ನದಲ್ಲಿದ್ದೇವೆ. ರನ್‌ವೇ ವಿಸ್ತರಣೆಗೆ ಭೂಸ್ವಾಧೀನ ಪ್ರಕ್ರಿಯೆ ಶೇಕಡಾ 80 ರಷ್ಟು ಮುಗಿದಿದೆ. 46 ಎಕರೆ ಮಾತ್ರ ಬಾಕಿ ಇದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಪ್ರಕ್ರಿಯೆ ಚುರುಕಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರತಿಕ್ರಿಯಿಸಿದರು.
‘ಮೈಸೂರು-ನಂಜನಗೂಡು ಹೆದ್ದಾರಿ ಮಾರ್ಗ ಬದಲಾವಣೆ, ರೈಲ್ವೆ ಹಳಿಯನ್ನು ಅಂಡರ್ ಪಾಸ್‌ಗೆ ಬದಲಿಸುವ ಸಂಬಂಧ ರೈಲ್ವೆ ಇಲಾಖೆಯ ವರದಿಗಾಗಿ ಕಾಯುತ್ತಿದ್ದೇನೆ. ಉಡಾನ್ ಯೋಜನೆಯಡಿ ಮೈಸೂರಿಗೆ ಹೆಚ್ಚಿನ ವಿಮಾನಗಳ ಸಂಪರ್ಕಕ್ಕೆ ಪ್ರಯತ್ನಿಸಲಾಗುತ್ತಿದೆ. ಈ ಸಂಬಂಧ ಏರ್‌ಲೈನ್ ಸಂಸ್ಥೆಗಳೊಂದಿಗೆ ಮಾತುಕತೆ ನಡೆದಿದೆ’ ಎಂದರು.
ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ನಗರ ಘಟಕದ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್ ಇದ್ದರು.
PublicNext
09/12/2024 07:59 pm