ಹುಬ್ಬಳ್ಳಿ: ಅಂಡರ್-19 ರಾಜ್ಯ ಕ್ರಿಕೆಟ್ ತಂಡಕ್ಕೆ ಹುಬ್ಬಳ್ಳಿಯ ಯುವಕನೋರ್ವ ಆಯ್ಕೆಯಾಗುವ ಮೂಲಕ ವಾಣಿಜ್ಯ ನಗರಿ ಕೀರ್ತಿ ಹೆಚ್ಚಿಸಿದ್ದಾನೆ.
ಹೌದು. ಹುಬ್ಬಳ್ಳಿಯ ಜೆ.ಜಿ. ಕಾಮರ್ಸ್ ಕಾಲೇಜ್‌ನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಕ್ರಿಕೆಟ್ ಆಟಗಾರ ರಾಜೇಂದ್ರ ಡಂಗನವರ ಧಾರವಾಡದ ಯುವರಾಜ್ ಸಿಂಗ್ ಎಂದೇ ಫೇಮಸ್. ಎಡಗೈ ಸ್ಪಿನ್ ಬೌಲಿಂಗ್ ಜೊತೆಗೆ ಮಧ್ಯಮ ಕ್ರಮಾಂಕದ ಹೊಡಿಬಡಿ ಆಟಕ್ಕೂ ರಾಜೇಂದ್ರ ಸೈ ಎನಿಸಿಕೊಂಡಿದ್ದಾರೆ. ಅವರು ಪ್ರತಿಷ್ಠಿತ ವಿನೂ ಮಂಕಡ್ ಟ್ರೋಫಿಯಲ್ಲಿ ಪ್ರತಿನಿಧಿಸಲಿರುವ 19 ವರ್ಷದೊಳಗಿನ ರಾಜ್ಯ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಇದೇ 28ರಿಂದ ಅಕ್ಟೋಬರ್ 4ರವರೆಗೆ ನಡೆಯಲಿರುವ ಪಂದ್ಯಾವಳಿಯಲ್ಲಿ ಆಡಲು ಧಾರವಾಡ ವಲಯದಿಂದ ಅರ್ಹತೆ ಪಡೆದ ರಾಜೇಂದ್ರ ಬಿಸಿಸಿಐ ಸಿ ಲೆವಲ್ ಹಾಗೂ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸೋಮಶೇಖರ ಶಿರಗುಪ್ಪಿ ಬಳಿ ತರಬೇತಿ ಪಡೆದಿದ್ದಾರೆ. 6ನೇ ವಯಸ್ಸಿಗೆ ಬ್ಯಾಟ್ ಹಿಡಿಯಲಾರಂಭಿಸಿದ ರಾಜೇಂದ್ರ ಸಿಸಿಕೆ ಧಾರವಾಡ ಪರ ಮೊದಲ ಡಿವಿಷನ್, ಬೆಂಗಳೂರಿನ ಫ್ರೆಂಡ್ಸ ಕ್ರಿಕೆಟ್ ಯೂನಿಯನ್ ಪರ ಸಹ ಆಟವಾಡಿದ್ದು, 14 ಮತ್ತು 16ರೊಳಗಿನ ತಂಡದಲ್ಲೂ ತನ್ನ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಸದ್ದು, ಮಾಡಿದ್ದು, ಈಗ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದಾರೆ.
ಕೌಟುಂಬಿಕ ಹಿನ್ನೆಲೆ:
ಅನೀಶ್ವರ ಗೌತಮ್ ನಾಯಕನಾಗಿರುವ 19ರೊಳಗಿನ ತಂಡದಲ್ಲಿ ಸ್ಥಾನ ಪಡೆದಿರುವ ರಾಜೇಂದ್ರ ಸಾಮಾಜಿಕ ಕಾರ್ಯಕರ್ತ, ಸೆಂಟ್ರಲ್ ಬಿಜೆಪಿ ಮುಖಂಡ ಶಶಿಶೇಖರ ಡಂಗನವರ ಹಾಗೂ ಗೌರಿ ದಂಪತಿ ಪುತ್ರನಾಗಿದ್ದು, ಮಗ ಉತ್ತಮ ಸಾಧನೆ ಮಾಡುವ ವಿಶ್ವಾಸ ಹೊಂದಿದ್ದಾರೆ. ಓದಿನಲ್ಲೂ ಮುಂದಿರುವ ಈತ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.84ರಷ್ಟು ಅಂಕ ಗಳಿಸಿದ್ದಾನೆ.
ಹಲವು ವರ್ಷಗಳ ನಂತರ ವಾಣಿಜ್ಯ ನಗರಿಯ ಯುವಕ ರಾಜ್ಯ ತಂಡದಲ್ಲಿ ಸ್ಥಾನ ಪಡೆದಿದ್ದು, ಈಗಾಗಲೇ ಇಂದೋರ್ ತಲುಪಿರುವ ರಾಜೇಂದ್ರ ಉತ್ತಮ ಪ್ರದರ್ಶನ ನೀಡಲು ಎಂಬುದು ಕ್ರೀಡಾಭಿಮಾನಿಗಳ ಆಶಯವಾಗಿದೆ.
Kshetra Samachara
20/09/2021 05:55 pm