ಧಾರವಾಡ: ನಿನ್ನೆಯಷ್ಟೆ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಹೊಂದಿಕೊಂಡ ಹನುಮನಕೊಪ್ಪ ಗ್ರಾಮದ ರೈತರು ಹಾಕಿದ್ದ ಫಲ ಭವಿಷ್ಯ ಇಂದು ಬಯಲಾಗಿದೆ. ರಾಜಕೀಯ ಬದಲಾವಣೆ ಹಾಗೂ ಮಳೆಯ ಬಗ್ಗೆ ಬೊಂಬೆಗಳು ಭವಿಷ್ಯ ನುಡಿದಿವೆ.
ಶುಕ್ರವಾರ ಯುಗಾದಿ ಅಮವಾಸ್ಯೆಯಾಗಿದ್ದರಿಂದ ಸಂಜೆ ಹಳ್ಳದ ದಂಡೆಯ ಮೇಲೆ ರೈತರು ಫಲ ಹಾಕಿ ಬಂದಿದ್ದರು.
ಚೌಕಾಕಾರದ ಆಕೃತಿಯ ನಾಲ್ಕೂ ದಿಕ್ಕಿನಲ್ಲಿ ಸೈನಿಕನ ಆಕೃತಿ, ರಾಜಕೀಯ ಮನುಷ್ಯನ ಆಕೃತಿ, ರೈತನ ಆಕೃತಿಯನ್ನು ಮಣ್ಣಿನಿಂದ ಮಾಡಿಡಲಾಗಿತ್ತು. ಅಲ್ಲದೇ ನಾಲ್ಕೂ ಮೂಲೆಗೆ ಅನ್ನದ ಉಂಡೆಗಳನ್ನಿಡಲಾಯಿತು. ಜೊತೆಗೆ ಎತ್ತುಗಳ ಆಕೃತಿ, ಗಣಪತಿ, ಶಿವ, ಪಾರ್ವತಿಯರ ಮೂರ್ತಿಯನ್ನೂ ಮಾಡಿಡಲಾಗಿತ್ತು. ಅದರ ಮುಂದೆ ಎಲ್ಲಾ ಮಳೆಯ ಹೆಸರಿನಲ್ಲಿ ಯಕ್ಕಿಯ ಎಲೆಗಳನ್ನು ಇಡಲಾಗಿದ್ದು, ಹಿಂಗಾರು, ಮುಂಗಾರು ಬೆಳೆಗಳಾದ ಹೆಸರು, ಉದ್ದು, ಶೇಂಗಾ, ಕಡಲೆ, ಜೋಳಗಳನ್ನು ಯಕ್ಕಿಯ ಎಲೆಗಳಲ್ಲಿ ಮುಚ್ಚಿಡಲಾಗಿತ್ತು.
ಇಂದು ಬೆಳಿಗ್ಗೆ ಗ್ರಾಮಸ್ಥರು ಅದನ್ನು ಹೋಗಿ ನೋಡಿದಾಗ ರಾಜಕೀಯ ವ್ಯಕ್ತಿಯ ಮೂರ್ತಿಗೆ ಯಾವುದೇ ಪೆಟ್ಟಾಗಿರಲಿಲ್ಲ. ನಾಲ್ಕೂ ದಿಕ್ಕಿನಲ್ಲಿದ್ದ ಯಾವುದೇ ಮೂರ್ತಿಗೂ ಪೆಟ್ಟಾಗಿರಲಿಲ್ಲ. ಆದರೆ, ಉಳುಮೆ ಮಾಡುವ ರೈತನ ಮೂರ್ತಿಗೆ ಪೆಟ್ಟಾಗಿತ್ತು. ಇದು ರೈತನೊಬ್ಬನಿಗೆ ಪೆಟ್ಟಾಗುತ್ತದೆ ಎಂಬ ಸಂದೇಶವಾಗಿದೆ. ಅಲ್ಲದೇ ಅನ್ನದ ಉಂಡೆಗಳು ಯಥಾಸ್ಥಿತಿಯಲ್ಲಿದ್ದವು. ಯಕ್ಕಿಯ ಎಲೆಗಳಲ್ಲಿ ನೀರಿನ ಹನಿಗಳು ನಿಂತಿದ್ದವು. ಇದರ ಆಧಾರದ ಮೇಲೆ ಮಳೆಗಳು ಯಾವ ರೀತಿ ಇದೆ. ಬೆಳೆಗಳಿಗೆ ಬೆಲೆ ಹೇಗಿದೆ ಎಂಬುದನ್ನು ಈ ಗ್ರಾಮಸ್ಥರು ನಿರ್ಧರಿಸಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂಬುದನ್ನು ಬೊಂಬೆಗಳು ನಿರ್ಧರಿಸಿವೆ. ಕಳೆದ ವರ್ಷ ರಾಜಕೀಯದಲ್ಲಿ ಬದಲಾವಣೆಯಾಗುತ್ತದೆ ಎಂಬುದನ್ನು ಈ ಬೊಂಬೆಗಳು ಹೇಳಿದ್ದವು. ಅದರಂತೆ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದಿದ್ದರು. ಪ್ರಸಕ್ತ ವರ್ಷದ ಭವಿಷ್ಯ ಬರುವ ದಿನಗಳಲ್ಲಿ ಸತ್ಯವಾಗುತ್ತದೆಯಾ ಅಥವಾ ಸುಳ್ಳಾಗುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
Kshetra Samachara
02/04/2022 12:36 pm