ವರದಿ: ವಿನೋದ ಇಚ್ಚಂಗಿ ಪಬ್ಲಿಕ್ ನೆಕ್ಸ್ಟ್
ನವಲಗುಂದ: ಹೋಳಿ ಹಬ್ಬದ ಕಾಮಣ್ಣ ಎಂದ ಕೂಡಲೇ ನೆನಪಾಗೋದು ಸಮಾನತೆಗೆ ಸಾಕ್ಷಿಯಾದ ನಮ್ಮ ನವಲಗುಂದ ರಾಮಲಿಂಗೇಶ್ವರ ಕಾಮಣ್ಣ. ಇದಕ್ಕೆ ಸಾಕಷ್ಟು ದೊಡ್ಡ ಇತಿಹಾಸವಿದೆ, ಜನರಲ್ಲಿ ದೊಡ್ಡ ನಂಬಿಕೆ ಇದೆ. ಈ ಎಲ್ಲದರ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡ್ತೀವಿ.
ಹೌದು. ಹೋಳಿ ಹಬ್ಬಕ್ಕೆ ಕಾಮಣ್ಣನನ್ನು ಸ್ಥಾಪಿಸಿ, ಸುಡುವುದು ಸರ್ವೇ ಸಾಮಾನ್ಯ. ಆದರೆ ಹೋಳಿ ಹಬ್ಬದ ದಿನ ಅಗ್ನಿ ಸ್ಪರ್ಶವಾದ ನಂತರ ಕಾಮದೇವ ಮತ್ತೆ ಪುನರ್ಜನ್ಮ ಪಡೆಯುತ್ತಾನೆ. ಹೀಗೆ ಪುನರ್ಜನ್ಮಗೊಂಡ ಕಾಮದೇವ ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಪೂಜೆಗೊಳ್ಳುತ್ತಾನೆ. ಈಗ ನಾವು ನಿಮಗೆ ಹೇಳಲು ಹೊರಟಿರೋದು ನವಲಗುಂದದ ರಾಮಲಿಂಗೇಶ್ವರ ಕಾಮಣ್ಣನ ಬಗ್ಗೆ. ರಾಮಲಿಂಗೇಶ್ವರ ದೇಗುಲದಲ್ಲಿ ಕಾಮನನ್ನು ಪ್ರತಿಷ್ಠಾಪಿಸುವುದರಿಂದ ಈ ಗುಡಿಗೆ ರಾಮಲಿಂಗೇಶ್ವರ ಕಾಮ ಎನ್ನಲಾಗುತ್ತದೆ.
ಬೇಡಿದ ವರವನ್ನು ದಯಪಾಲಿಸುವ ಕಾಮಣ್ಣ ಎಂದೇ ಖ್ಯಾತಿ ಹೊಂದಿರುವ ರಾಮಲಿಂಗ ಕಾಮಣ್ಣನ ದರ್ಶನಕ್ಕೆ ರಾಜ್ಯ ಹೊರ ರಾಜ್ಯಗಳಿಂದ ಭಕ್ತರು ಬರುತ್ತಾರೆ. ಬಂದು ತಮ್ಮ ಹರಕೆಗಳನ್ನು ಹೊರುತ್ತಾರೆ.
ಇನ್ನು ಚಾವಡಿ ಓಣಿ ಕಾಮ, ಸಿದ್ದಾಪುರ ಓಣಿ, ಮಾದರ ಓಣಿ, ಅಂಬೇಡ್ಕರ್ ನಗರ, ಗೌಡ್ರ ಓಣಿ, ಹಳ್ಳದ ಓಣಿ, ತೆಗ್ಗಿನಕೇರಿ, ದೇಸಾಯಿ ಅವರ ಕಾಮ, ಸುಬೆದಾರ ಕಾಮ, ಅಕ್ಕಿ ಓಣಿ, ಭೋವಿ ಓಣಿ, ಗುಡ್ಡದ ಕೇರಿ ಓಣಿ ಹೀಗೆ ಹಲವು ಕಾಮಣ್ಣಗಳಿವೆ. ಚಾವಡಿ ಓಣಿಯ ಕಾಮ ಇಲ್ಲಿ ತಂದೆಯ ಸ್ವರೂಪದ್ದಾಗಿದೆ. ರಾಮಲಿಂಗ ಹಿರಿಯ ಸಹೋದರನೆಂದೂ ಉಳಿದ ಎಲ್ಲ ಕಾಮಣ್ಣಗಳು ಕಿರಿಯ ಸಹೋದರರೆಂದೂ ಪ್ರತೀತಿ ಇಲ್ಲಿದೆ. ಇಷ್ಟೆಲ್ಲಾ ಮಹತ್ವ ಇರುವ ಹೋಳಿ ಹಬ್ಬದ ಕಾಮಣ್ಣ ಕಳೆದ ವರ್ಷ ಕೋವಿಡ್ ನಿಂದಾಗಿ ಕಳೆಗುಂದಿತ್ತು. ಈ ವರ್ಷ ಅದ್ದೂರಿಯಾಗಿ ನೆರವೇರಲಿದೆ.
ಇಲ್ಲಿ ಪ್ರತಿಷ್ಟಾಪಿಸಿದ ಕಾಮಣ್ಣನಿಗೆ ಸಹೋದರರಂತಿರುವ ಕಾಮಣ್ಣರು ಮೆರವಣಿಗೆಯಲ್ಲಿ ಬಂದು ದರ್ಶನ ಪಡೆದು ಹೋಗುತ್ತವೆ. ಹಾಗೆಯೇ ರಾಮಲಿಂಗೇಶ್ವರ ಕಾಮಣ್ಣನು ಕೂಡ ತಂದೆಯ ಸ್ವರೂಪದಲ್ಲಿರುವ ಚಾವಡಿ ಕಾಮಣ್ಣನ ಭೇಟಿಗೆ ಮೆರವಣಿಗೆಯಲ್ಲಿ ಹೋಗುವ ದೃಶ್ಯ ಎಂಥವರನ್ನೂ ಮನಕಲುಕುವಂತೆ ಮಾಡುತ್ತೆ, ಇಲ್ಲಿ ಭಕ್ತಿ ಶ್ರದ್ದೆಗಳು ರೋಮಾಂಚನಗೊಳಿಸುತ್ತವೆ. ಎಲ್ಲ ಕಾಮಣ್ಣರ ದಹನವಾದ ನಂತರ ಮರುದಿನದ ಬೆಳಗಿನ ವೇಳೆ ರಾಮಲಿಂಗೇಶ್ವರ ಕಾಮಣ್ಣನ ದಹನವಾಗುತ್ತದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/03/2022 06:47 pm