ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ
ಧಾರವಾಡ: ಜಾಗೆಯ ಜಗಳದಿಂದ ಕಳೆದ 25 ವರ್ಷಗಳ ಹಿಂದೆ ನಿಂತು ಹೋಗಿದ್ದ ಸಂಪ್ರದಾಯ ಇದೀಗ ಮತ್ತೆ ಆಚರಣೆಗೆ ಬಂದಿದೆ. ಯುವ ಸಮೂಹವೆಲ್ಲ ಸೇರಿಕೊಂಡು ನಿಂತು ಹೋಗಿದ್ದ ಸಂಪ್ರದಾಯವನ್ನು ಮತ್ತೆ ಪುನರಾರಂಭಿಸಿದ್ದಾರೆ.
ಹೌದು! ಇದು ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಕಥೆ. ಗ್ರಾಮದ ಹೊಸಪೇಟೆ ಗಲ್ಲಿಯಲ್ಲಿರುವ ಮನ್ನಾಸಾಹೇಬ್ ಓಣಿಯವರಿಗಷ್ಟೇ ಸಂಬಂಧಿಸಿದ ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ಮಧ್ಯೆ ವ್ಯಾಜ್ಯ ನಡೆಯುತ್ತಿತ್ತು. ಕೋರ್ಟ್ ಕೂಡ ಈ ಜಾಗಕ್ಕೆ ಸಂಬಂಧಿಸಿದಂತೆ ತಡೆಯಾಜ್ಞೆ ಕೂಡ ನೀಡಿತ್ತು. ಈ ಜಾಗದಲ್ಲಿ ಜುಮ್ಮಾ ಷಾ ಮಕಾನ್ ಹಾಗೂ ಮುಸ್ಲಿಂ ಧರ್ಮಗುರು ಶೇಖ್ ಶಿಲಾವರ ಷಾ ಅವರ ಸಮಾಧಿ ಕೂಡ ಇದೆ. 25 ವರ್ಷಗಳ ಹಿಂದೆ ಈ ಜಾಗದಲ್ಲಿ ಮೊಹರಂ ಹಬ್ಬದಂದು ಪಾಂಜಾಗಳನ್ನು ಪ್ರತಿಷ್ಠಾಪನೆ ಮಾಡಿ ಅದ್ಧೂರಿಯಿಂದ ಹಬ್ಬ ಆಚರಣೆ ಮಾಡಲಾಗುತ್ತಿತ್ತು. ಯಾವಾಗ ಈ ಜಾಗದ ಜಗಳ ಆರಂಭವಾಯಿತೋ ಅಂದಿನಿಂದ ಸಂಪ್ರದಾಯ ನಿಂತು ಹೋಗಿತ್ತು. ಯಾವಾಗ ನ್ಯಾಯಾಲಯದಲ್ಲಿ ವ್ಯಾಜ್ಯ ಬಗೆಹರಿಯಿತೋ ಈಗ ಮತ್ತೆ ದೇವರ ಪ್ರತಿಷ್ಠಾಪನೆ ಮಾಡಲಾಗಿದೆ.
ಜಗಳದಿಂದಾಗಿ ಈ ಜಾಗ ಪಾಳು ಬಿದ್ದಿತ್ತು. ವ್ಯಾಜ್ಯ ಬಗೆಹರಿದ ನಂತರ ಮುಸ್ಲಿಂ ಸಮಾಜದ ಯುವಕರೆಲ್ಲ ಸೇರಿಕೊಂಡು ಜಾಗವನ್ನು ಸ್ವಚ್ಛಗೊಳಿಸಿ ಜುಮ್ಮಾ ಷಾ ಮಕಾನ್ ಮರು ನಿರ್ಮಾಣ ಮಾಡಿಸಿ ಅಲ್ಲೇ ದೇವರನ್ನು ಪ್ರತಿಷ್ಠಾಪನೆ ಮಾಡಿ ಪ್ರಸಕ್ತ ವರ್ಷ ಅದ್ಧೂರಿಯಾಗಿ ಮೊಹರಂ ಹಬ್ಬ ಆಚರಣೆ ಮಾಡಿದ್ದಾರೆ.
ಕಳೆದ ಎಂಟು ಹತ್ತು ದಿನಗಳಿಂದ ಆ ಜಾಗದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಇವತ್ತು ಕೂಡ ಅದ್ಧೂರಿಯಿಂದ ಸಂಪ್ರದಾಯಬದ್ಧವಾಗಿ ಮೊಹರಂ ಹಬ್ಬ ಆಚರಣೆ ಮಾಡಲಾಯಿತು. ಒಟ್ಟಾರೆಯಾಗಿ ಎರಡೂವರೆ ದಶಕದ ನಂತರ ಆ ಜಾಗಕ್ಕೆ ಮತ್ತೆ ಮೊದಲಿನ ಕಳೆ ಬಂದಿರುವುದಂತೂ ಸುಳ್ಳಲ್ಲ.
Kshetra Samachara
20/08/2021 06:20 pm