ಧಾರವಾಡ: ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಜೂನ್ 13 ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜೂನ್ 11 ರ ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ.
ಪ್ರಜಾ ಪ್ರತಿನಿಧಿ ಕಾಯ್ದೆ 1951 ರ ಸೆಕ್ಷನ್ 126 ರ ಪ್ರಕಾರ ಮತದಾನ ಮುಕ್ತಾಯವಾಗುವ 48 ಗಂಟೆಗಳ ಮುನ್ನ ಸಾರ್ವಜನಿಕ ಸಭೆ, ಸಮಾರಂಭ ಹಾಗೂ ಬಹಿರಂಗ ಪ್ರಚಾರ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾಗಿರುವ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಈ ಕುರಿತು ಆದೇಶ ಹೊರಡಿಸಿರುವ ಅವರು, ಮೆರವಣಿಗೆ, ಬಹಿರಂಗ ಸಭೆಗಳನ್ನು ಆಯೋಜಿಸುವುದು, ಉದ್ದೇಶಿಸಿ ಮಾತನಾಡುವುದನ್ನು ನಿಷೇಧಿಸಲಾಗಿದೆ. ಸಿನಿಮಾ, ಟೆಲಿವಿಷನ್ ಹಾಗೂ ಇತರ ಮಾಧ್ಯಮಗಳ ಮೂಲಕ ಚುನಾವಣಾ ಸಂಬಂಧಿತ ಮಾಹಿತಿ, ವಿಶ್ಲೇಷಣೆ ಹಾಗೂ ಸಮೀಕ್ಷೆಗಳ ಪ್ರಕಟಣೆ ನಿಷಿದ್ಧವಾಗಿದೆ. ಸಂಗೀತ ಸಂಜೆ, ನಾಟಕ ಅಥವಾ ಮನರಂಜನಾ ಕಾರ್ಯಕ್ರಮಗಳ ಮೂಲಕ ಮತದಾರರ ಮೇಲೆ ಪ್ರಭಾವ ಬೀರುವಂತಹ ಚಟುವಟಿಕೆಗಳನ್ನು ನಡೆಸಬಾರದು. ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿರುವ ಅಧಿಕಾರಿ, ಸಿಬ್ಬಂದಿ ಹೊರತುಪಡಿಸಿ, ಇತರೆ ವ್ಯಕ್ತಿಗಳು ಒಂದೇ ಸ್ಥಳದಲ್ಲಿ 5 ಕ್ಕಿಂತ ಹೆಚ್ಚು ಜನ ಸೇರುವುದನ್ನು ನಿರ್ಬಂಧಿಸಲಾಗಿದೆ. ಈ ಆದೇಶವು ಜೂನ್ 11 ರ ಸಂಜೆ 5 ಗಂಟೆಯಿಂದ ಜೂನ್ 13 ರ ಮಧ್ಯರಾತ್ರಿಯವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಮುದ್ರಣ, ವಿದ್ಯುನ್ಮಾನ ಮಾಧ್ಯಮಗಳಿಗೆ ಜಾಹೀರಾತು ನೀಡುವ ಮುನ್ನ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ನಿಗಾ ಸಮಿತಿ (ಎಂಸಿಎಂಸಿ) ಮೂಲಕ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಅಭ್ಯರ್ಥಿಗಳು ಜಾಹೀರಾತು ವಿನ್ಯಾಸಗಳೊಂದಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಪೂರ್ವಾನುಮತಿ ಪಡೆಯಬೇಕು. ಮಾಧ್ಯಮ ಸಂಸ್ಥೆಗಳು ಪೂರ್ವಾನುಮತಿ ಪತ್ರದ ಪ್ರತಿಯನ್ನು ಪರಿಶೀಲಿಸಿ ಜಾಹೀರಾತು ಪ್ರಕಟಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
Kshetra Samachara
09/06/2022 01:19 pm