ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಮತ್ತೇ ರಾಜಕೀಯ ನೆಲೆಗಾಗಿ ಲಾಡ್ ಅಲೆದಾಟ... ಆಸೆ ಆಮಿಷಗಳ ಮೇಲಾಟ

ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿಗಾರರಿಂದ

ಕಲಘಟಗಿ : ಲಿಂಗಾಯತರ ಪ್ರಾಬಲ್ಯವಿರುವ ಕಲಘಟಗಿ ಮತಕ್ಷೇತ್ರದಲ್ಲಿ ಹೇಗೋ ಆಟ ಆಡಿ, ಮತದಾರರಿಗೆ ಇನ್ನಿಲ್ಲದ ಆಮಿಷವೊಡ್ಡಿ 2008 ರ ಚುನಾವಣೆಯಲ್ಲಿ ಗೆದ್ದಿದ್ದ ಸಂತೋಷ ಲಾಡ್ ಈಗ ರಾಜಕೀಯ ಅಸ್ವಿತ್ವಕ್ಕಾಗಿ, ಕಳೆದುಕೊಂಡ ನೆಲೆಗಾಗಿ ಇನ್ನಿಲ್ಲದ ಅಲೆದಾಟವಾಡುತ್ತಿದ್ದಾರೆ.

ಎರಡು ಅವಧಿಗೆ ಕಲಘಟಗಿ ಮತ ಕ್ಷೇತ್ರವನ್ನು ತಮ್ಮದಾಗಿಸಿಕೊಂಡಾಗ " ಇನ್ನು 5 ವರ್ಷ ಕಲಘಟಗಿಗೆ ಬರುವುದಿಲ್ಲ ಏನು ಮಾಡ್ತಿ?'' ಎಂದು ಮತದಾರರಿಗೆ ಸೊಕ್ಕಿನಿಂದ ಸವಾಲು ಹಾಕಿದ್ದರು ಇದೇ ಲಾಡ್. ನಂತರ ಅದೇ ಮತದಾರ ಸರಿಯಾಗಿ ಬುದ್ಧಿ ಕಲಿಸಿ ಮನೆಟ್ಟಿದಾಗ ವೇದಿಕೆಯಲ್ಲಿ ಕಣ್ಣೀರು ಸುರಿಸಿ ನಾಟಕವಾಡಿದ್ದು ಉಂಟು.

ಹಣ ಬಲದೊಂದಿಗೆ ಮಹಿಳೆಯರಿಗೆ ಸೀರೆ ಹಂಚುವುದು ತಮಗೆ ಬೇಕಾದ ರೈತರಿಗೆ ಬೋರ್ ವೆಲ್ ಕೊರೆಸುವುದು, ಗುಡಿ ಗುಂಡಾರ ಜಾತ್ರೆಗಳಿಗೆ ದೇಣಿಗೆ ನೀಡುವುದು ಲಾಡ್ ಅವರ ಚುನಾವಣಾ ತಂತ್ರಗಾರಿಕೆ ಎಂಬುದು ಎಲ್ಲರಿಗೂ ಗೊತ್ತು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾರರನ್ನು ಭ್ರಷ್ಟರನ್ನಾಗಿ ಮಾಡಿದ ಕೀರ್ತಿ ಲಾಡ್ ಅವರಿಗೆ ಸಲ್ಲುತ್ತದೆ ಎಂಬ ಆಪಾದನೆ ಕೇಳಿಬರುತ್ತದೆ.

ಸದನದಲ್ಲಿ ಅತಿ ಕಡಿಮೆ ಹಾಜರಾತಿ ಇದ್ದ ಶಾಸಕರೆಂದರೆ ಲಾಡ್. ಅಧಿಕಾರವನ್ನು ಸ್ವಹಿತಾಸಕ್ತಿಗೆ ಬಳಸಿಕೊಂಡು ಜನಹಿತ ಕಾರ್ಯಗಳನ್ನು ಹಿಂಬಾಲಕರ ಮೂಲಕಳ ಮೂಲಕ ನಡೆಯಿಸಿದ್ದಾರೆ ಎಂಬ ಮಾತು ಸುಳ್ಳಲ್ಲ. ಪಂಚಾಯಿತಿಗಳಿಗೆ ಭೇಟಿ ಇಲ್ಲ, ರಾಷ್ಟ್ರೀಯ ಹಬ್ಬಗಳಿಗೂ ಹಾಜರಾತಿ ಇಲ್ಲ ಇದನ್ನೆಲ್ಲ ಕಂಡು ಬೇಸತ್ತ ಕಲಘಟಗಿ ಮತ ಕ್ಷೇತ್ರದ ಮತದಾರರು 2018ರ ಚುನಾವಣೆಯಲ್ಲಿ ಬಿಜೆಪಿಗೆ ಜೈ ಎಂದಾಗ ಲಾಡ್ ಚಕ್ರಾಧಿಪತ್ಯ ಅಂತ್ಯಗೊಂಡಿತ್ತು.

2023 ರ ಚುನಾವಣೆ ಇನ್ನೂ 15 ತಿಂಗಳು ಇರುವಾಗಲೇ ಲಾಡ್ ಹೊಸ ಆಟ ಶುರು ಮಾಡಿದ್ದಾರೆ. ಕೊವಿಡ್, ಅತಿವೃಷ್ಟಿ ಸಮಯದಲ್ಲಿ ಅಕ್ಕಿ ಹಂಚಿಕೆ, ಉಚಿತ ಕ್ಯಾಂಟೀನ್ ಮೂಲಕ ಆಹಾರ ನೀಡಲು ಆರಂಭಿಸಿದ್ದಾರೆ. ಅಂಗನವಾಡಿ ಸಾಹಾಯಕಿಯರು ಮತ್ತು ಆಶಾ ಕಾರ್ಯ ಕರ್ತರಿಗೆ ಸನ್ಮಾನ ಮಾಡಿ ಅವರ ಸಹಾನುಭೂತಿ ಗಿಟ್ಟಿಸುವ ತಂತ್ರಕ್ಕೆ ಬಿದ್ದಿದ್ದಾರೆ. ಶಾಸಕರಾಗಿದಾಗ ದೇವಿಕೊಪ್ಪ ಗ್ರಾಮದಲ್ಲಿ ವಿದ್ಯುತ್ ಅವಘಡ ಸಂಭವಿಸಿ ರೈತರ ಸಾವು ಸಂಭವಿಸಿದಾಗ ಬಾರದ ವ್ಯಕ್ತಿ ಈಗ ಸನ್ಮಾನಿಸುತ್ತಿರುವುದು ವಿಪರ್ಯಾಸ.

ಇದೆಲ್ಲದರ ನಡುವೆ ನಾಗರಾಜ ಛಬ್ಬಿ ಕೂಡ ಕ್ಷೇತ್ರದ ಎಂಎಲ್ಎ ಆಕಾಂಕ್ಷಿಯಾಗಿ ತೊಡೆ ತಟ್ಟಿದ್ದಾರೆ. ಲಾಡ್ ಸಿದ್ದರಾಮಯ್ಯ ಬಣವಾದರೆ, ನಾಗರಾಜ ಛಬ್ಬಿ ಡಿ ಕೆ ಶಿವಕುಮಾರ್ ಬಣ ಎಂದು ಕಾರ್ಯಕರ್ತರಲ್ಲಿಯೇ ಗುದ್ದಾಟ ನಡೆದಿದೆ.

ಸಕ್ಕರೆ ಕಾರ್ಖಾನೆ ಮಾಡುತ್ತೇನೆಂದು ಮೊದಲನೇ ಅವಧಿಯಲ್ಲಿ ಸುಳ್ಳು ಭರವಸೆ ನೀಡಿದ್ದು ಜನ ಮರೆತಿಲ್ಲ. ತಾಲೂಕಿನ ಬಡ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಟ್ರೈನಿಂಗ್ ಸೆಂಟರ್ ನಾಮ್ ಕಾವಾಸ್ತೆ ಆಗಿದೆ. ಈಗ ಕೆಎಎಸ್ ಐಎಎಸ್ ತರಬೇತಿ ನೀಡುವುದಾಗಿ ಸಿನಿಮಾ ನಾಯಕರಿಂದ ಪ್ರಚಾರ ನಡೆಸಿದ್ದಾರೆ. ಆದರೆ ಮತದಾರ ಪ್ರಭು ಇವರ ಆಸೆ ಆಮಿಷಗಳಿಗೆ ಮರಳಾಗುವನೇ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/02/2022 08:43 pm

Cinque Terre

87.08 K

Cinque Terre

31

ಸಂಬಂಧಿತ ಸುದ್ದಿ