ಪಬ್ಲಿಕ್ ನೆಕ್ಸ್ಟ್ ಸಂಪಾದಕೀಯ : ಕೇಶವ ನಾಡಕರ್ಣಿ
ಹುಬ್ಬಳ್ಳಿ : ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ ಕೇವಲ ಜನಸಾಮಾನ್ಯರಿಗೆ ಮಾತ್ರವೆ? ಈ ರಾಜಕಾರಣಿಗಳಿಗೆ ಅನ್ವಯವಾಗುವುದಿಲ್ಲವೆ?
ಕೊರೊನಾ, ಒಮಿಕ್ರಾನ್ ಕ್ರಮೇಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ದಿ. 28 ರಿಂದ ರಾತ್ರಿ ಕರ್ಫ್ಯೂ ಸೇರಿದಂತೆ ಮಹತ್ವದ ನಿಯಮ ಜಾರಿಗೊಳಿಸಲಾಗಿದೆ. ಮದುವೆ ಇತರೆ ಸಮಾರಂಭಗಳಲ್ಲಿ ಶೇ.50 ಕ್ಕಿಂತ ಹೆಚ್ಚು ಜನ ಸೇರಬಾರದು ಇತ್ಯಾದಿ ಇತ್ಯಾದಿ.
ಮಾಸ್ಕ್ ಧರಿಸದ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ದಂಡ ಹಾಕಲು ಬೆಂಗಳೂರಲ್ಲಿ ಮಾರ್ಷಲ್ ಗಳು ಬೀದಿಗಿಳಿದಿದ್ದಾರೆ.
ಆದರೆ ಇಲ್ಲಿ ನೋಡಿ, ನಗರದಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಸ್ವಾಗತ ಕೋರುವ ಆತುರದಲ್ಲಿ ಕಾರ್ಯಕರ್ತರು ಹಾಗೂ ನಾಯಕರು ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಸಿ.ಎಂಗೆ ಮುತ್ತಿಗೆ ಹಾಕಿದ್ದಾರೆ. ಪೊಲೀಸರು ಜನಜಂಗುಳಿ ಚದುರಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಿಲ್ಲ.
ನೂರಾರು ಜನ ಸೇರಿದವರಲ್ಲಿ ಯಾರೊಬ್ಬರೂ ಮಾಸ್ಕ್ ಧರಿಸಿಲ್ಲ. ಸಾಮಾಜಿಕ ಅಂತರವಂತೂ ಇಲ್ಲವೇ ಇಲ್ಲ. ಒಬ್ಬರ ಮೇಲೊಬ್ಬರು ಬಿದ್ದು ತಮ್ಮ ಅಭಿಮಾನ ತೋರಿಸುವ ಸಾಹಸ ಮಾಡುತ್ತಿದ್ದಾರೆ. ಕನಿಷ್ಟ ಸಿ.ಎಂ ಬೊಮ್ಮಾಯಿ ಅವರಾದರೂ ತಮ್ಮನ್ನು ಸುತ್ತುವರಿದವರನ್ನು ದೂರ ಸರಿಸುವಂತೆ ಭದ್ರತಾ ಸಿಬ್ಬಂದಿಗೆ ಹೇಳ ಹೇಳಬಹುದಿತ್ತಲ್ಲವೆ? ಏಕೆ ರಾಜಕೀಯ ಸಭೆ ಸಮಾರಂಭಗಳಿಗೆ ಬರುವುದಿಲ್ಲವೆಂದು ಕೊರೊನಾ, ಒಮಿಕ್ರಾನ್ ಹೇಳಿವೆಯೆ?
ಹೊಟೇಲಗಳಲ್ಲಿ ನಿರ್ದಿಷ್ಟ ಸಂಖ್ಯೆಯಲ್ಲಿ ಗ್ರಾಹಕರಿಗೆ ಮಾತ್ರ ಅವಕಾಶ ಕೊಡಬೇಕೆಂಬ ನಿಯಮ ಹೊರಡಿಸುವ ಸರಕಾರಕ್ಕೆ ಇದು ಕಾಣುವುದಿಲ್ಲವೇ? ಇದೇ ವೃತ್ತಿ ನಂಬಿ ಬದುಕುತ್ತಿರುವ ಸಾವಿರಾರು ನೌಕರರಿಗೆ ಹಾಗೂ ಊಟಕ್ಕೆ ಹೋಟಲುಗಳನ್ನೇ ನಂಬಿರುವ ಲಕ್ಷಾಂತರ ಜನರಿಗೆ ತೊಂದರೆಯುಂಟು ಮಾಡುವ ನಿಯಮಗಳು ರಾಜಕಾರಣಿಗಳಾದ ನಿಮಗೆ ಅನ್ವಯವಾಗುವುದಿಲ್ಲವೆ ಎಂದು ಕೇಳಿದರೆ ಏನು ಉತ್ತರಿಸುತ್ತೀರಿ ಬೊಮ್ಮಾಯಿ ಅವರೆ?
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/12/2021 05:11 pm