ಹುಬ್ಬಳ್ಳಿ: ದಶಕಗಳ ಕಳಸಾ ಬಂಡೂರಿ ಹೋರಾಟಕ್ಕೆ ತಾತ್ಕಾಲಿಕ ಜಯ ಸಿಕ್ಕು ವರ್ಷವೇ ಕಳೆದಿದೆ. ಸಣ್ಣ ಪ್ರಮಾಣದಲ್ಲಿ ಆರಂಭವಾದ ಈ ಹೋರಾಟ ನಂತರ ಇಡೀ ಉತ್ತರ ಕರ್ನಾಟಕದ ರೈತರು, ಜನರು ಬೀದಿಗಿಳಿದು ಹೋರಾಟ ಮಾಡುವ ಮೂಲಕ ಸರ್ಕಾರವನ್ನು ಎಚ್ಚರಿಸಿದ್ದರು. ಆದರೆ ಇನ್ನೇನೂ ರೈತರು ಇಟ್ಟಿದ್ದ ಬೇಡಿಕೆ ಈಡೇರಿತು ಅನ್ನೋವಷ್ಟರಲ್ಲೇ ಕಾಮಗಾರಿ ವಿಳಂಬ ಧೋರಣೆಯಿಂದ ರೈತರು ಕಂಗಾಲಾಗಿದ್ದಾರೆ.
ಹೌದು.. ದಶಕಗಳ ಕಾಮಗಾರಿ ಈಗ ಆರಂಭವಾಗುತ್ತೆ, ಕೆಲವೇ ದಿನಗಳಲ್ಲಿ ಶುರುವಾಗುತ್ತೆ ಅನ್ನೋ ನಂಬಿಕೆಯಲ್ಲಿಯೇ ಇಷ್ಟು ದಿನಗಳನ್ನ ಇಡೀ ಉತ್ತರ ಕರ್ನಾಟಕದ ಜನರೇ ಎದುರು ನೋಡುತ್ತಿದ್ದಾರೆ. ಆದರೆ ಕಳಸಾ ಬಂಡೂರಿ ನಾಲಾ ಯೋಜನೆ ಮಾತ್ರ ಸದ್ಯಕ್ಕೆ ಆರಂಭವಾಗುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಹಲವಾರು ವರ್ಷಗಳಿಂದ ರೈತರು ತಮ್ಮ ಬೇಡಿಕೆಯನ್ನು ಈಡೇರಿಸಿ ಅಂತ ಲಾಠಿ ರುಚಿ ತಿಂದು ಮಳೆ ಬಿಸಿಲನ್ನು ಲೆಕ್ಕಸಿದೆ ಪ್ರತಿಭಟನೆ ಮಾಡಿ ಸರ್ಕಾರದ ಕಣ್ತೆರೆಸುವ ಪ್ರಯತ್ನ ಮಾಡಿದ್ದರು. ಸರ್ಕಾರವೂ ಸಹ ಮಹಾದಾಯಿ ವಿಚಾರವಾಗಿ ಗೋವಾ, ಮಹಾರಾಷ್ಟ್ರ ಸರ್ಕಾರಗಳ ಜೊತೆ ಮಾತುಕತೆಯನ್ನ ಸಹ ಮಾಡಿತ್ತು. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ ಮಹಾದಾಯಿ ಪ್ರಕರಣ ಇತ್ಯರ್ಥ ಮಾಡ್ತೀವಿ ಅಂತ ಹೇಳಿದ್ದ ಬಿಜೆಪಿ ಸರ್ಕಾರ ಇದೀಗ ಸರ್ಕಾರ ಬಂದು 4 ವರ್ಷ ಕಳೆದರೂ ಇನ್ನು ಸಹ ಕಳಸಾ ಬಂಡೂರಿ ನಾಲಾ ಯೋಜನೆ ಬಗ್ಗೆ ತುಟಿಯೇ ಬಿಚ್ಚುತ್ತಿಲ್ಲ.
ಬೆಳಗಾವಿ ಅಧಿವೇಶನದಲ್ಲಿ ಕಳಸಾ ಬಂಡೂರಿ ನಾಲಾ ಬಗ್ಗೆ ಚರ್ಚೆ ಆಗಬಹುದು ಎಂದುಕೊಂಡಿರುವ ರೈತರಿಗೆ ಸದ್ಯ ಅಲ್ಲಿಯೂ ಚರ್ಚೆ ಆಗೋದು ಅನುಮಾನಕ್ಕೆ ಕಾರಣವಾಗಿದೆ. ಸರ್ಕಾರಕ್ಕೆ ಹಲವು ಬಾರಿ ರೈತರು ಮನವಿ ಸಲ್ಲಿಸಿದರು ಸಹ ಕಾಮಗಾರಿ ಬಗ್ಗೆ ಯಾರೊಬ್ಬರೂ ಮಾತನಾಡುತ್ತಿಲ್ಲ. ಇನ್ನೂ ಎರಡು ರಾಜ್ಯಗಳ ಜೊತೆ ಚರ್ಚೆ ಮಾಡಿ ಕಾಮಗಾರಿ ಶುರುಮಾಡಬೇಕಿದ್ದ ರಾಜ್ಯ ಸರ್ಕಾರ ಬೇರೊಂದು ಪ್ಲಾನ್ ಮಾಡಿಕೊಂಡಿದೆ. ಇನ್ನೇನು ಒಂದೂವರೆ ವರ್ಷದಲ್ಲಿ ಮತ್ತೆ ವಿಧಾನ ಸಭೆ ಚುನಾವಣೆ ಬರಲಿದ್ದು, ಉತ್ತರ ಕರ್ನಾಟಕದ ಬಹು ಬೇಡಿಕೆಯ ಈ ಕಳಸಾ ಬಂಡೂರಿ ಯೋಜನೆಯನ್ನ ಮತ್ತೆ ಜಾರಿ ತರುತ್ತೇವೆ ಅನ್ನೋ ಅಸ್ತ್ರವನ್ನಾಗಿ ಬಳಸಿಕೊಳ್ಳೋ ಪ್ಲಾನ್ ಮಾಡಿದೆ ಅಂತ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.
ಒಟ್ಟಾರೆ ಸರ್ಕಾರ ಅಧಿಕಾರಿಕ್ಕೆ ಬಂದರೆ ಯೋಜನೆ ಜಾರಿ ಎನ್ನುವ ರಾಜಕಾರಣಿಗಳು ಜನರ ಕಷ್ಟಕ್ಕೆ ಮಾತ್ರ ಮುಂದಾಗುತ್ತಿಲ್ಲ. ತಮ್ಮ ಬೇಳೆ ಬೇಯಿಸಿಕೊಳ್ಳಲು ಯೋಜನೆಗಳನ್ನು ಜಾರಿ ತರುವುದಾಗಿ ಜನರನ್ನು ನಂಬಿಸುವ ಮೊದಲು ಕಾಮಗಾರಿ ಪೂರ್ಣ ಮಾಡಿ ಮತ ಕೇಳಲಿ ಅನ್ನೋದೇ ಜನರ ಆಶಯ.
Kshetra Samachara
11/12/2021 06:42 pm