ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅಮೃತ ಗ್ರಾಮ ಪಂಚಾಯ್ತಿ ಯೋಜನೆ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕ್ರಮ

ಧಾರವಾಡ: 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ರಾಜ್ಯ ಸರ್ಕಾರವು ಗ್ರಾಮ ಪಂಚಾಯತಿಗಳ ಮೂಲ ಸೌಕರ್ಯಗಳನ್ನು ಉನ್ನತೀಕರಿಸಲು ಜಾರಿಗೊಳಿಸಲಾಗುತ್ತಿರುವ ಅಮೃತ ಗ್ರಾಮ ಪಂಚಾಯತ ಯೋಜನೆಯನ್ನು ಧಾರವಾಡ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದೆಂದು ಕೈಮಗ್ಗ, ಜವಳಿ, ಸಕ್ಕರೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ಧಾರವಾಡ ಜಿಲ್ಲಾ ಪಂಚಾಯತ ಸಂಭಾಗಣದಲ್ಲಿ ಅಮೃತ ಗ್ರಾಮ ಪಂಚಾಯತ ಯೋಜನೆಯಡಿ ಗ್ರಾಮ ಪಂಚಾಯತಿಗಳ ಆಯ್ಕೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮ ಪಂಚಾಯತ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ವಿವಿಧ ರೀತಿಯ ಯೋಜನೆಗಳನ್ನು ಸರ್ಕಾರದಿಂದ ಅನುಷ್ಠಾನಗೊಳಿಸಲಾಗಿದೆ. ಅಮೃತ ಯೋಜನೆಯಡಿ ಗ್ರಾಮ ಪಂಚಾಯತಿಗಳ ಆಯ್ಕೆಗಾಗಿ ಸರ್ಕಾರವು ನಿರ್ಧಿಷ್ಟ ಮಾರ್ಗಸೂಚಿಗಳನ್ನು ನೀಡಿದ್ದು, ಅವುಗಳನ್ವಯ ಪ್ರತಿ ತಾಲೂಕಿನಿಂದ ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದೆಂದು ಅವರು ಹೇಳಿದರು.

ಸರ್ಕಾರದ ವಿವಿಧ ಯೋಜನೆಗಳ ಅಡಿ ಗ್ರಾಮ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಸಮುದಾಯ ಭವನಗಳ ಸದುಪಯೋಗವಾಗುವಂತೆ ಕ್ರಮವಹಿಸಬೇಕು. ದುರುಪಯೋಗವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಸಾಧ್ಯವಾದರೆ ಗ್ರಂಥಾಲಯದಂತಹ ಮುಖ್ಯ ಕಾರ್ಯಗಳಿಗೆ ಅವುಗಳನ್ನು ಬಳಸಿಕೊಳ್ಳಬೇಕು ಎಂದು ಸಚಿವರು ಸೂಚಿಸಿದರು.

ಜಲ ಜೀವನ ಮಿಷನ್‍ದಲ್ಲಿ ಮೇಲ್ಮಟ್ಟದ (ಓಎಚ್‍ಟಿ) ಜಲಸಂಗ್ರಹಗಳನ್ನು ಶಾಲಾ ಆವರಣದಲ್ಲಿ ಮತ್ತು ಹೆಚ್ಚು ಜನಸಂದಣಿ ಸೇರುವ ಸ್ಥಳಗಳಲ್ಲಿ ನಿರ್ಮಿಸದಂತೆ ನಿರ್ದೇಶಿಸಲಾಗಿದೆ. ಮತ್ತು ಸಂಬಂಧಿಸಿದ ಅಧಿಕಾರಿಗಳು ಶಾಲಾ ಆವರಣ ಹಾಗೂ ಇತರ ಕಡೆಗಳಲ್ಲಿ ಇರುವ ನಿರುಪಯುಕ್ತ ಓಎಚ್‍ಟಿ ಟ್ಯಾಂಕ್‍ಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಜಿಲ್ಲೆಯ ವಿವಿಧ ಶಾಲಾ ಆವರಣದಲ್ಲಿರುವ ಹೆಸ್ಕಾಂನ ಟಿಸಿ ಕಂಬಗಳು, ಪಶು ಆಸ್ಪತ್ರೆ, ಓಎಚ್‍ಟಿ ಟ್ಯಾಂಕ್‍ಗಳನ್ನು ತೆರವುಗೊಳಿಸಲು ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಶಾಸಕ ಸಿ.ಎಂ.ನಿಂಬಣ್ಣವರ ಮಾತನಾಡಿ, ಗ್ರಾಮ ಪಂಚಾಯತ ಮಟ್ಟದಲ್ಲಿರುವ ಗ್ರಂಥಾಲಯಗಳ ಅಧಿಕಾರಿಗಳಿಗೆ ಸೂಕ್ತ ತರಬೇತಿಯನ್ನು ನೀಡಬೇಕು ಮತ್ತು ಆಯಾ ಗ್ರಂಥಾಲಯಗಳಲ್ಲಿರುವ ಪುಸ್ತಕಗಳು ಸದುಪಯೋಗವಾಗುವಂತೆ, ಗ್ರಾಮಸ್ಥರು ಓದುವಂತೆ ಯೋಜನೆ ರೂಪಿಸಬೇಕು ಎಂದು ಹೇಳಿದರು.

ಶಾಸಕ ಅಮೃತ ದೇಸಾಯಿ ಮಾತನಾಡಿ, ರಾಜ್ಯ ಸರ್ಕಾರದ ಅಮೃತ ಯೋಜನೆಯು ಅಗತ್ಯವಿರುವ ಗ್ರಾಮಗಳಲ್ಲಿ ಜಾರಿಗೊಳಿಸಬೇಕು. ಹಿಂದಿನ ಸರ್ಕಾರಗಳಲ್ಲಿ ಗ್ರಾಮಗಳ ಅಭಿವೃದ್ಧಿಗಾಗಿ ಸುವರ್ಣ ಗ್ರಾಮ, ಮುಖ್ಯಮಂತ್ರಿಗಳ ಗ್ರಾಮ ಯೋಜನೆ ಸೇರಿದಂತೆ ವಿವಿಧ ರೀತಿಯ ಯೋಜನೆಗಳು ಜಾರಿಯಾಗಿವೆ. ಆದ್ದರಿಂದ ಹಿಂದಿನ ಯೋಜನೆಗಳಿಗೆ ಸೇರದೆ ಇರುವ ಮತ್ತು ಅಭಿವೃದ್ಧಿ ಅಗತ್ಯವಿರುವ ಗ್ರಾಮಗಳನ್ನು ಆಯ್ಕೆಗೆ ಪರಿಗಣಿಸಬೇಕೆಂದು ತಿಳಿಸಿದರು.

Edited By : Nagesh Gaonkar
Kshetra Samachara

Kshetra Samachara

11/09/2021 04:18 pm

Cinque Terre

23.85 K

Cinque Terre

1

ಸಂಬಂಧಿತ ಸುದ್ದಿ