ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪ್ರಸಕ್ತ ವರ್ಷ 60 ರಿಂದ 62 ಸೀಟುಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳೀನ್‌ಕುಮಾರ ಕಟೀಲ್ ಹೇಳಿದರು.
ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ, ಕಲಬುರ್ಗಿ ಹಾಗೂ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೇರಲಿದೆ. ಮೂರೂ ಜಿಲ್ಲೆಗಳಲ್ಲಿ ನಾನು ಪ್ರವಾಸ ಮಾಡಿದ್ದೇನೆ. ಬೆಳಗಾವಿಯಲ್ಲಿ ಪ್ರಸಕ್ತ ವರ್ಷ ಪಾರ್ಟಿ ಚಿನ್ಹೆ ಆಧಾರದ ಮೇಲೆ ಮತದಾನ ನಡೆಯಲಿದೆ ಎಂದರು.
ಹುಬ್ಬಳ್ಳಿ, ಧಾರವಾಡ ಪಾಲಿಕೆಯಲ್ಲಿ ಹತ್ತು ವರ್ಷ ಬಿಜೆಪಿ ಅಧಿಕಾರ ನಡೆಸಿದೆ. ಇಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಮುನ್ನುಡಿ ಬರೆದಿದ್ದೇ ಬಿಜೆಪಿ. ಸ್ಮಾರ್ಟ್ ಸಿಟಿ ಯೋಜನೆ, ಅಮೃತ ಯೋಜನೆ, ಮನೆ ಮನೆಗೆ ಗಂಗೆ, ಮನೆ ಮನೆಗೆ ಗ್ಯಾಸ್ ಯೋಜನೆ ಸೇರಿದಂತೆ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರ ನೇತೃತ್ವದಲ್ಲಿ ಅವಳಿನಗರಕ್ಕೆ ಸಾಕಷ್ಟು ಅನುದಾನ ತಂದು ಕೆಲಸ ಮಾಡಲಾಗಿದೆ. ಮನೆ, ಮನೆಗೆ ಮಹಾನಗರ ಪಾಲಿಕೆ ಎಂಬ ಧ್ಯೆಯೋದ್ದೇಶ ಇಟ್ಟುಕೊಂಡು ನಾವು ಚುನಾವಣೆಗೆ ಇಳಿದಿದ್ದೇವೆ ಎಂದರು.
ಇಲ್ಲಿನ ಸ್ಥಳೀಯ ಮಾಜಿ ಮುಖ್ಯಮಂತ್ರಿಗಳಾದಂತಹ ಜಗದೀಶ ಶೆಟ್ಟರ್, ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ ಅವರು, ಸಾಕಷ್ಟು ಅನುದಾನ ತಂದು ವಾರ್ಡ್‌ಗಳ ಅಭಿವೃದ್ಧಿ, ನಗರ ಸೌಂದರ್ಯಿಕರಣ ಮಾಡಿದ್ದಾರೆ. ಹೀಗಾಗಿ ಪ್ರಸಕ್ತ ವರ್ಷ ಕೂಡ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಮುಂದಿನ ಐದು ವರ್ಷಗಳ ಕಾಲ ಅವಳಿನಗರ ಸ್ಮಾರ್ಟ್ ನಗರಗಳಾಗಿ ಬೆಳೆಯುವುದರಲ್ಲಿ ಯಾವುದೇ ಸಂದೇಹವಿಲ್ಲ. ನೆನೆಗುದಿಗೆ ಬಿದ್ದ ಎಲ್ಲಾ ಕಾಮಗಾರಿಗಳು ಮುಂದಿನ ದಿನಗಳಲ್ಲಿ ಪೂರ್ಣಗೊಳ್ಳಲಿವೆ ಎಂದರು.
ಪ್ರತ್ಯೇಕ ಮಹಾನಗರ ಪಾಲಿಕೆ ಬೇಕು ಎಂಬುದು ಜನರ ಕೂಗು ನಮ್ಮ ಕೂಗಲ್ಲ. ಅವಳಿ ಮಕ್ಕಳನ್ನು ನಾವು ಬೇರೆ ಮಾಡಿದಂತಾಗುತ್ತದೆ. ಜನರ ಅಭಿಪ್ರಾಯದ ಮೇರೆಗೆ ಪ್ರತ್ಯೇಕ ಮಹಾನಗರ ಪಾಲಿಕೆ ಬಗ್ಗೆ ನಾವು ಮುಂದುವರೆಯುತ್ತೇವೆ ಎಂದರು.
ಶಾಸಕ ಅಮೃತ ದೇಸಾಯಿ, ಮಹೇಶ ಟೆಂಗಿನಕಾಯಿ, ಮಾಜಿ ಶಾಸಕಿ ಸೀಮಾ ಮಸೂತಿ, ತವನಪ್ಪ ಅಷ್ಟಗಿ ಸೇರಿದಂತೆ ಅನೇಕರು ಸುದ್ದಿಗೋಷ್ಠಿಯಲ್ಲಿದ್ದರು.
Kshetra Samachara
31/08/2021 11:51 am