ಧಾರವಾಡ :ಕಳೆದ ಸಾಲಿಗೆ ಹೋಲಿಸಿದರೆ ಧಾರವಾಡ ಜಿಲ್ಲೆಯಲ್ಲಿ 2020 ನೇ ಸಾಲಿಗೆ ಕಡಿಮೆ ಪ್ರಮಾಣದಲ್ಲಿ ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿದ್ದು, ಸಾರಿಗೆ, ಪೊಲೀಸ್, ಲೊಕೋಪಯೋಗಿ. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿದರೆ ರಸ್ತೆ ಅಪಘಾತಗಳು ಸಂಭವಿಸದಂತೆ ಸಂಪೂರ್ಣವಾಗಿ ನಿಯಂತ್ರಿಸಬಹುದು ಎಂದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಭವನದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದರು.
ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಇರುವ ರಾಷ್ಟ್ರೀಯ ಹೆದ್ದಾರಿ 4 ರಲ್ಲಿನ 30 ಕಿ.ಮೀ ರಸ್ತೆಯಲ್ಲಿನ ಅಪಘಾತಗಳನ್ನು ತಪ್ಪಿಸಲು ಸಂಚಾರಿ ನಿಯಮಗಳ ಪಾಲನೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಪ್ರತಿ ಕಿ.ಮೀ.ಗೆ 60 ವೇಗದ ಮಿತಿ ಇದ್ದರೂ ಬಸ್, ಟ್ರಕ್, ಮಿನಿಬಸ್, ಕಾರ್ ಮುಂತಾದ ವಾಹನಗಳ ಚಾಲಕರು ನಿಯಮ ಪಾಲಿಸದೇ ವೇಗವಾಗಿ ವಾಹನ ಚಾಲನೆ, ವಾಹನಗಳ ಓವರ್‍ಟೆಕ್ ಮಾಡುತ್ತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಅಪಘಾತ, ಸಾವು-ನೋವು ಆಗುತ್ತಿವೆ. ರಸ್ತೆ ನಿರ್ವಾಹಕ ಗುತ್ತಿಗೆದಾರ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹುಬ್ಬಳ್ಳಿ-ಧಾರವಾಡ ಬೈಪಾಸ್‍ನ 30 ಕಿ.ಮೀ ರಸ್ತೆ ಪರಿಶೀಲಿಸಿ ಮುಂದಿನ 72 ಗಂಟೆಗಳಲ್ಲಿ ಅಪಾಯಕಾರಿ ಸ್ಥಳ, ಸೇತುವೆ ತಿರುವು ಗುರುತಿಸಿ ಅಲ್ಲಿ ಕನಿಷ್ಠ 20 ಎಚ್ಚರಿಕೆ ಫಲಕ, ವೇಗದ ಮೀತಿ ಸೂಚಿಸುವ ಮತ್ತು ಸುರಕ್ಷತಾ ನಿಯಮಗಳ ಫಲಕಗಳನ್ನು ಅಳವಡಿಸಿ ವರದಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.
ಇತ್ತೀಚಿಗೆ ಬೈಪಾಸ್ ರಸ್ತೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಅಸುನೀಗಿದವರ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಮತ್ತು ಟಿಪ್ಪರ್ ವಾಹನದ ಚಾಲಕನ ಮೇಲೆ ಅಜಾಗರೂಕತೆಯ ವಾಹನ ಚಾಲನೆ ಸೇರಿದಂತೆ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ರಾಜ್ಯ ಕಾನೂನು, ಸುವ್ಯವಸ್ಥೆ ಹಾಗೂ ಸಂಚಾರಿ ವಿಭಾಗದ ಅಪರ ಪೊಲೀಸ್ ಮಹಾನಿರ್ದೇಶಕ ಪ್ರತಾಪರೆಡ್ಡಿ ಅವರು ಮಾತನಾಡಿ, ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ವಾಹನ ಹಾಗೂ ವಾಹನ ಚಾಲಕರಿಂದ ಕಾನೂನು ಹಾಗೂ ನಿಯಮಗಳ ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸಬೇಕು. ಅಪಾಯಕಾರಿ ರಸ್ತೆ, ತಿರುವು, ಸೇತುವೆಗಳ ಸಮೀಪದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕು. ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯಲ್ಲಿ ಅಪಘಾತ ವಲಯಗಳನ್ನು ಗುರುತಿಸಿ, ಎಚ್ಚರಿಕೆ ಸಂದೇಶಗಳನ್ನು ಚಾಲಕರಿಗೆ ಎದ್ದು ಕಾಣುವಂತೆ ಅಳವಡಿಸಬೇಕು ಎಂದು ಹೇಳಿದರು.
Kshetra Samachara
18/01/2021 03:32 pm