ಧಾರವಾಡ: ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಕುಲಪತಿಗಳು ಬೇಕಾಗಿದ್ದಾರೆ. ಆಸಕ್ತರು ಶೀಘ್ರದಲ್ಲಿಯೇ ಸೂಕ್ತ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಬಹುದು. ಇದೇ ಬರುವ ಜೂ.30ಕ್ಕೆ ಈಗಿರುವ ಕುಲಪತಿ ಡಾ. ಎಂ.ಬಿ.ಚೆಟ್ಟಿ ಅವರ ಅಧಿಕಾರಾವಧಿ ಪೂರ್ಣಗೊಳ್ಳುತ್ತಿದ್ದು, ಕುಲಪತಿಗಳ ನೇಮಕಾತಿ ಮಾಡಲಾಗುತ್ತಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ಸೇವಾವಧಿ ಹಾಗೂ ಸಾಧನೆಗಳ ಕುರಿತು ಸೂಕ್ತ ದಾಖಲೆಗಳೊಂದಿಗೆ ಜೂ. 30 ದಿನಗಳ ಒಳಗಾಗಿ ಅರ್ಜಿ ಸಲ್ಲಿಸಬೇಕು.
ಹೀಗೊಂದು ಪ್ರಕಟಣೆಯನ್ನು ಸರ್ಕಾರದ ಕೃಷಿ ಇಲಾಖೆ ಉಪ ಕಾರ್ಯದರ್ಶಿ ಹೊರಡಿಸಿದ್ದೇ ತಡ ಆಕಾಂಕ್ಷಿಗಳ ಪೈಪೋಟಿ ಹಾಗೂ ಲಾಬಿ ಎಲ್ಲಿಲ್ಲದಂತೆ ನಡೆಯುತ್ತಿದ್ದು, ಸೇವಾ ಜೇಷ್ಠತೆ ಹೊಂದಿರುವ ಆಕಾಂಕ್ಷಿಗಳು ಈಗಾಗಲೇ ತಮ್ಮ ಕಸರತ್ತು ತೋರಿಸಲಾರಂಭಿಸಿದ್ದಾರೆ. ಈಗಿರುವ ಕುಲಪತಿ ಡಾ.ಎಂ.ಬಿ.ಚೆಟ್ಟಿ ಅವರ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದವು. ಅಲ್ಲದೇ ಅವರ ಅವಧಿ ಪೂರ್ಣಗೊಳ್ಳವ ಪೂರ್ವದಲ್ಲಿಯೇ ಕೃಷಿ ಮೇಳ ನಡೆಸಲು ಭರದ ಸಿದ್ಧತೆ ನಡೆದಿದೆ. ಈಗ ಮತ್ತೆ ನೂತನ ಕುಲಪತಿಗಳ ನೇಮಕಕ್ಕಾಗಿ ಸರ್ಕಾರದಿಂದ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿಗಳ ಆಸೆಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.
ಸಾಮಾನ್ಯವಾಗಿ ಈ ಹಿಂದೆ ಕುಲಪತಿಗಳ ನೇಮಕಾತಿ ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯಪಾಲರಿಂದ ನೇರವಾಗಿ ಆಯ್ಕೆ ಸಮಿತಿ ರಚನೆ ಮಾಡಿ ಅವರಿಂದಲೇ ಅರ್ಹ ಕುಲಪತಿಗಳ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುತ್ತಿತ್ತು. ಆದರೆ, ಅದರಲ್ಲಿಯೂ ಕೆಲ ಗೋಲ್ ಮಾಲ್ ನಡೆಯುತ್ತಿವೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸದ್ಯ ಮುಕ್ತವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಇದರಿಂದ ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ಸೇವಾನುಭವ, ಸಂಶೋಧನೆ, ಸಾಧನೆ ಸೇರಿದಂತೆ ಇತರ ದಾಖಲೆಗಳನ್ನು ಸಲ್ಲಿಕೆ ಮಾಡಿದಾಗ ಅವುಗಳನ್ನು ಪರಿಶೀಲಿಸಿ ಆಯ್ಕೆ ಸಮಿತಿ ಸೂಕ್ತ ವ್ಯಕ್ತಿಗಳ ಪಟ್ಟಿ ಸಿದ್ದಪಡಿಸಿ ಅವುಗಳನ್ನು ರಾಜ್ಯಪಾಲರಿಗೆ ಸಲ್ಲಿಸುತ್ತದೆ. ನಂತರದಲ್ಲಿ ರಾಜ್ಯಪಾಲರು ಒಬ್ಬರ ಹೆಸರನ್ನು ಘೋಷಿಸುತ್ತಾರೆ. ಇದು ಸಾಮಾನ್ಯವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ಸದ್ಯ ಆದೇಶ ಹೊರಬರುತ್ತಿದ್ದಂತೆ ಕುಲಪತಿಗಳಾಗಬೇಕೆನ್ನುವ ಆಕಾಂಕ್ಷಿಗಳು ಸಚಿವರ ಹಾಗೂ ಸರಕಾರದ ಕದ ತಟ್ಟುತ್ತಿದ್ದು, ಇದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
Kshetra Samachara
23/04/2022 05:32 pm