ಹುಬ್ಬಳ್ಳಿ: ವಾರ್ಡ್ ನಂಬರ್ 35 ರ ಶ್ರೀ ಶಾಕ್ತ ಪೀಠ ನಗರ, ಗಣೇಶ ಕಾಲೋನಿ, ಧನ್ವಂತರಿ ಕಾಲೋನಿ, ಆಶ್ರಯ ಕಾಲೋನಿ , ಮಹಾಲಕ್ಷ್ಮಿ ಬಡಾವಣೆ, ಶಟ್ಟನ ಗೌಡ್ರ ಕಾಲೋನಿ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳಿಗೆ 24 ಲಕ್ಷ ವೆಚ್ಚದ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಪೈಪ್ ಲೈನ್ ಕಾಮಗಾರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಭೂಮಿ ಪೂಜೆ ನೆರವೇರಿಸಿದರು.
ಶಾಕ್ತ ಪೀಠ ನಗರದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಅವಳಿ ನಗರದಲ್ಲಿ 24*7 ನಿರಂತರ ಕುಡಿಯುವ ನೀರು ಸರಬರಾಜು ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ.
ಉಣಕಲ್ ಕೆರೆಯ ಹಿಂಬಾಗದ ಅನಧಿಕೃತವಾದ ಬಡಾವಣೆಗಳ ನಿವಾಸಿಗಳು ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುಂತೆ ಹಲವು ಬಾರಿ ಮನವಿ ಮಾಡಿದ್ದರು. ಇದರ ಅನ್ವಯ ಕುಡಿಯುವ ನೀರು ಸರಬರಾಜು ಮಂಡಳಿಯಿಂದ 24 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಸಂಪರ್ಕ ಕಲ್ಪಿಸಲಾಗುತ್ತಿದೆ.
1 ಕಿ.ಮೀ ಮುಖ್ಯ ಪೈಪ್ ಲೈನ್ ಹಾಗೂ 400 ಮೀಟರ್ ಒಳ ಪೈಪ್ ಲೈನ್ ಗಳನ್ನು ಹೊಸದಾಗಿ ಹಾಕಲಾಗುತ್ತಿದೆ. ಅನಧಿಕೃತ ಬಡವಾಣೆಗಳನ್ನು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಉಣಕಲ್ ಹುಲಿಕೊಪ್ಪ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಅಡಿ ತರಲಾಗಿದೆ. ಶೀಘ್ರವಾಗಿ ರಸ್ತೆ ಅಗಲೀಕರಣದೊಂದಿಗೆ ಮೇಲ್ದರ್ಜೆಗೆ ಏರಿಸಲಾಗುವುದು.
ಉಣಕಲ್ ಕೆರೆಯ ಸುತ್ತ ಮುತ್ತ ಅನಧಿಕೃತ ಬಡಾವಣೆಗಳನ್ನು ನಿರ್ಮಿಸುವದನ್ನು ನಿಲ್ಲಿಸಬೇಕು. ಇದರಿಂದಾಗಿ ಕೆರೆ ಪರಿಸರ ಹಾಳಾಗುವುದು. ಉಣಕಲ್ ಕೆರೆ ಉಳಿಸಲು ಎಲ್ಲರೂ ಪ್ರಯತ್ನಿಸಬೇಕು. ಸ್ಮಾರ್ಟ್ ಸಿಟಿ ಅಡಿಯಲ್ಲಿ ಉಣಕಲ್ ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಹೇಳಿದರು.
Kshetra Samachara
17/11/2020 05:35 pm