ಹುಬ್ಬಳ್ಳಿ: ಅವರೆಲ್ಲರೂ ಪ್ರಜಾಪ್ರಭುತ್ವದ ಕನಸನ್ನು ಸಾಕಾರಗೊಳಿಸಲು ಹೊರಟವರು. ತಮ್ಮ ಕರ್ತವ್ಯದ ಮೂಲಕ ಭವ್ಯ ಭಾರತಕ್ಕೆ ಪ್ರಜೆಗಳನ್ನು ನಿರ್ಮಾಣ ಮಾಡುವ ಜವಾಬ್ದಾರಿ ಹೊತ್ತವರು. ಆದರೆ ಈಗ ಅವರ ಶಿಕ್ಷಣದ ಗುಣಮಟ್ಟದ ಬಗ್ಗೆ ಅನುಮಾನ ಮೂಡುವಂತಾಗಿದೆ. ಹಾಗಿದ್ದರೇ ಯಾರು ಅವರು..? ಅವರು ಮಾಡಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ..
ಪಶ್ಚಿಮ ಶಿಕ್ಷಕರ ಚುನಾವಣೆಯಲ್ಲಿ ಕುಲಗೆಟ್ಟ ಮತಗಳಲ್ಲಿ ಏರಿಕೆಯಾಗಿದ್ದು, ಶಿಕ್ಷಕರ ಶಿಕ್ಷಣದ ಗುಣಮಟ್ಟದ ಬಗ್ಗೆ ಅನುಮಾನಗಳು ಹೆಚ್ಚಾಗುವಂತೆ ಮಾಡಿವೆ.
ಹೌದು.. ಮಕ್ಕಳನ್ನು ತಿದ್ದಿ ತಿಡಿ ಬುದ್ದಿವಂತರನ್ನಾಗಿ ಮಾಡುವ ಶಿಕ್ಷಕರೇ ಅವಿದ್ಯಾವಂತರಾದ್ರಾ ಎನ್ನುವಂತೆ ಮಾಡಿದೆ. ಮತ ಹೀಗೆ ಚಲಾಯಿಸಬೇಕು ಅಂತ ತಿಳಿ ಹೇಳಿದ್ರೂ ಅಮೂಲ್ಯವಾದ ಮತವನ್ನು ಬದಿಗೊತ್ತಿ ತಮಗೆ ತಿಳಿದ ರೀತಿಯಲ್ಲಿ ಶಿಕ್ಷಕರು ಮತ ಚಲಾವಣೆ ಮಾಡಿದ್ದಾರೆ.
ಈ ಚುನಾವಣೆಯಲ್ಲಿ ಬರೊಬ್ಬರಿ 1223 ಮತಗಳು ಕುಲಗೆಟ್ಟಿವೆ. ಸಾಂವಿಧಾನಿಕ ಹಕ್ಕನ್ನು ಚಲಾವಣೆ ಮಾಡಲು ಆಗದವರು ಇನ್ನೂ ಪ್ರಜಾಪ್ರಭುತ್ವ ಕನಸನ್ನು ಎಷ್ಟರಮಟ್ಟಿಗೆ ಸಾಕಾರಗೊಳಿಸುವರೋ ತಿಳಿಯದಂತಾಗಿದೆ.
ಇನ್ನೂ ಕಳೆದ 7 ಅವಧಿ ಅಂದರೆ 42 ವರ್ಷದ ಇತಿಹಾಸದಲ್ಲೇ ಈ ಬಾರಿಯೇ ಅತೀ ಹೆಚ್ಚು ಮತಗಳು ಕುಲಗೆಟ್ಟಿವೆ. 1980 ರಲ್ಲಿ 175, 1986 ರಲ್ಲಿ 205, 1992 ರಲ್ಲಿ 380, 1998 ರಲ್ಲಿ 571, 2004 ರಲ್ಲಿ 537, 2016 ರಲ್ಲಿ 784 ಮತಗಳು ಕುಲಗೆಟ್ಟಿದ್ವು.
ಈ ಬಾರಿಯ ಚುನಾವಣೆಯಲ್ಲೇ ಅಧಿಕ ಮತಗಳು ಕುಲಗೆಟ್ಟಿವೆ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದರೆ ಹಲವು ಅನುಮಾನ ಮೂಡಿವೆ. ಶಿಕ್ಷಕರ, ಶಿಕ್ಷಣದ ಗುಣಮಟ್ಟದ ಬಗ್ಗೆ ಅನುಮಾನ ಪಡುವ ವಾತಾವರಣ ನಿರ್ಮಾಣವಾಗಿದೆ. ಮಕ್ಕಳಿಗೆ ತಿದ್ದಿ ತೀಡಿ ಹೇಳಬೇಕಾದ ಶಿಕ್ಷಕರಿಂದಲೇ ತಪ್ಪುಗಳಾಗಿವೆ. ಅದೂ ಒಂದಲ್ಲ ಎರಡಲ್ಲ ಬರೊಬ್ಬರಿ 1223 ಶಿಕ್ಷಕರಿಂದ ತಪ್ಪು ಮತ ಚಲಾವಣೆಯಾಗಿದ್ದು, ಇದನ್ನೇ ಗಂಭೀರವಾಗಿ ಪರಿಗಣಿಸಿ ಸರ್ಕಾರ ಶಿಕ್ಷಕರ ಮೌಲ್ಯ ಮಾಪನ ಮಾಡುವಂತೆ ಸಾರ್ವಜನಿಕರ ಆಗ್ರಹ ವ್ಯಕ್ತವಾಗಿದೆ.
ಒಟ್ಟಿನಲ್ಲಿ ಸುಶಿಕ್ಷಿತ ಶಿಕ್ಷಕರೇ ಈ ರೀತಿಯಲ್ಲಿ ಬೇಜವಾಬ್ದಾರಿತನದಿಂದ ವರ್ತಿಸಿದರೇ ಚುನಾವಣೆ ಎಂಬುವಂತ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗುತ್ತದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸುವ ಮೂಲಕ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಬೇಕಿದೆ.
Kshetra Samachara
15/06/2022 06:51 pm