ಧಾರವಾಡ: ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರ ಮುಂದೆ ಶಿಕ್ಷಕರು ಕಣ್ಣೀರಿಟ್ಟ ಪ್ರಸಂಗ ನಡೆದಿದೆ.
ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ, ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಮತ್ತು ನೌಕರರ ಸಮನ್ವಯ ಸಮಿತಿ ರಾಜ್ಯ ಘಟಕದ ಸದಸ್ಯರು ಹಾಗೂ ಶಿಕ್ಷಕರು, ಖಾಸಗಿ ಶಿಕ್ಷಣ ಸಂಸ್ಥೆಗಳು ನೇಮಕ ಮಾಡಿಕೊಂಡ ಶಿಕ್ಷಕರ ಹುದ್ದೆಗಳನ್ನು ಲೋಪದೋಷ ಹುಡುಕದೇ ಅನುಮೋದಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
2015ರ ಒಳಗೆ ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಹಾಗೂ ಆರ್ಥಿಕ ಇಲಾಖೆ ಅನುಮತಿ ನೀಡಿದೆ. ಆ ಪ್ರಕಾರ ಸಂಸ್ಥೆಗಳು ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಅಭ್ಯರ್ಥಿಗಳು ಸಂದರ್ಶನಕ್ಕೆ ಕರೆದು ಆಯ್ಕೆ ಮಾಡಿಕೊಂಡಿವೆ. ಈ ಆಯ್ಕೆಗೆ ಆಯುಕ್ತರು ಅನುಮತಿ ನೀಡುತ್ತಿಲ್ಲ. ಕಡತಕ್ಕೆ ಸಹಿ ಮಾಡುತ್ತಿಲ್ಲ. ರಾಜ್ಯಮಟ್ಟದ ಅತೀ ಹೆಚ್ಚು ಓದಲ್ಪಡುವ ಪತ್ರಿಕೆಯ ರಾಜ್ಯ ಪುಟದಲ್ಲಿ ಶಿಕ್ಷಕರ ನೇಮಕಾತಿ ಸಂಬಂಧ ಜಾಹೀರಾತು ನೀಡಿದ ಸಂಸ್ಥೆಗಳಿಗೆ ಮಾತ್ರ ಅನುಮೋದನೆ ನೀಡುವುದಾಗಿ ಹೇಳುತ್ತಿದ್ದಾರೆ ಎಂದು ಜಿ.ಆರ್.ಭಟ್ ತಿಳಿಸಿದರು.
ಶಿಕ್ಷಣ ಸಂಸ್ಥೆಗಳು ರಾಜ್ಯಮಟ್ಟದ ಪತ್ರಿಕೆಯಲ್ಲಿ ರಾಜ್ಯ ಪುಟದಲ್ಲಿ ಶಿಕ್ಷಕರ ನೇಮಕಾತಿ ಸಂಬಂಧ ಜಾಹೀರಾತು ನೀಡದೇ ನೇಮಕಾತಿಗೆ ಅನುಮೋದನೆ ನೀಡುವಂತೆ ಆಗ್ರಹಿಸುತ್ತಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ತಿಳಿಸಿದರು.
ಹಲವು ಗಂಟೆಗಳ ಕಾಲ ಈ ಶಿಕ್ಷಕರ ನೇಮಕಾತಿ ಸಂಬಂಧ ಪ್ರತಿಭಟನೆ ನಡೆಯಿತು. ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಕೂಡ ಶಿಕ್ಷಕರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು.
Kshetra Samachara
12/08/2021 09:36 pm