ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸರ್ಕಾರಕ್ಕೆ ಗಡುವು ನೀಡಿದ ಲಿಂಗಾಯತ ಮಠಾಧೀಶರು

ಧಾರವಾಡ: ಸಮಾಜ ಸುಧಾರಕ ಬಸವಣ್ಣನವರ ಕುರಿತು ಪಠ್ಯ, ಪುಸ್ತಕದಲ್ಲಿ ಆಗಿರುವ ಲೋಪದೋಷಗಳನ್ನು ಸರ್ಕಾರ 10 ದಿನಗಳ ಒಳಗಾಗಿ ಸರಿಪಡಿಸುವಂತೆ ಉತ್ತರ ಕರ್ನಾಟಕದ ಪ್ರಮುಖ ಲಿಂಗಾಯತ ಮಠಾಧೀಶರು ಸರ್ಕಾರಕ್ಕೆ ಗಡುವು ನೀಡಿದ್ದಾರೆ.

ಧಾರವಾಡ ಕಲ್ಯಾಣ ನಗರದಲ್ಲಿರುವ ಸಿದ್ದರಾಮೇಶ್ವರ ಮಾರ್ಗದರ್ಶಿಯಲ್ಲಿ ಮಂಗಳವಾರ ಸುದೀರ್ಘ ಐದು ಗಂಟೆಗಳ ಸಭೆ ನಡೆಸಿದ 21 ಲಿಂಗಾಯತ ಮಠಾಧೀಶರು ಈ ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಕಳುಹಿಸಿದ್ದಾರೆ.

ಸಭೆಯ ಕುರಿತು ಮಾಧ್ಯಮಗಳಿಗೆ ತರಳಬಾಳು ಮಹಾಸಂಸ್ಥಾನ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಮಾಹಿತಿ ನೀಡಿ, ಬಸವಣ್ಣ ವೈದಿಕ ಪರಂಪರೆಯನ್ನು ಕಠೋರವಾಗಿ ವಿರೋಧಿಸಿ ಸಮಾನತೆ ಸಮಾಜವನ್ನು ಕಟ್ಟುವುದಕ್ಕೆ ಯತ್ನಿಸಿದರು. ಅವರದ್ದು ಅರಿವೇ ಗುರು ತತ್ವ. ಸಮಾಜದ ಎಲ್ಲಾ ಸ್ಥರದ ಜನರಿಗೂ ಸಮಾನ ಆತ್ಮಾಭಿಮಾನ ಸಿಗಬೇಕು ಎನ್ನುವ ಉದ್ದೇಶದಿಂದಲೇ ಅವರು ಬಸವ ಧರ್ಮವನ್ನು ಹುಟ್ಟು ಹಾಕಿದರು. ಅವರ ವಚನ ಸಾಹಿತ್ಯ ಮತ್ತು ತತ್ವಗಳನ್ನು ಏಕಾಏಕಿ ತಿದ್ದುಪಡಿ ಮಾಡುವ ದುಃಸ್ಸಾಹಸ ಖಂಡಿತ ಶೋಭೆ ತರುವಂತದ್ದಲ್ಲ ಎಂದರು.

ಧಾರವಾಡದ ಸಭೆಯಲ್ಲಿ ಎಲ್ಲಾ ಮಠಾಧಿಶರು ಸೇರಿಕೊಂಡು, ಆಗಿರುವ ಲೋಪದೋಷಗಳನ್ನು ಚರ್ಚಿಸಿ ಅವುಗಳನ್ನು ಸರಿಪಡಿಸಿದ್ದೇವೆ. ಇಲ್ಲಿನ ಹೊಸ ಮತ್ತು ಹಳೆ ಪಠ್ಯಗಳನ್ನು ಪರಿಶೀಲಿಸಿ ಪರಿಷ್ಕರಿಸಿದ್ದೇವೆ. ಈ ಪ್ರತಿಯನ್ನು ಸರ್ಕಾರಕ್ಕೆ ಕೊಡುತ್ತೇವೆ. 10 ದಿನಗಳ ಒಳಗಾಗಿ ಅವುಗಳನ್ನು ಸರ್ಕಾರ ತಿದ್ದುಪಡಿ ಮಾಡಬೇಕು. ಇಲ್ಲವಾದರೆ ನಾಡಿನ ಎಲ್ಲಾ ಮಠಾಧೀಶರು ಒಟ್ಟಾಗಿ ಸೇರಿ ಮುಂದಿನ ಹೋರಾಟದ ಕುರಿತು ಚಿಂತನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪಠ್ಯ ಪುಸ್ತಕದಲ್ಲಿ ಕೇವಲ ಬಸವಣ್ಣ ಮಾತ್ರವಲ್ಲ, ಕುವೆಂಪು, ಡಾ.ಬಿ.ಆರ್.ಅಂಬೇಡ್ಕರ್, ನಾರಾಯಣಗುರು ಸೇರಿದಂತೆ ಎಲ್ಲಾ ಮಹನೀಯರ ಕುರಿತು ಆಗಿರುವ ಲೋಪದೋಷಗಳನ್ನು ಕೂಡಲೇ ಸರ್ಕಾರ ಸರಿಮಾಡಬೇಕು. ಕೆಲವು ಸಾಹಿತಿಗಳು ಈಗಾಗಲೇ ತಮ್ಮ ಲೇಖನಗಳನ್ನು ಹಿಂದಕ್ಕೆ ಪಡೆದುಕೊಳ್ಳುತ್ತಿದ್ದಾರೆ. ಆದರೆ ಲೋಪದೋಷ ಸರಿಪಡಿಸಿದರೆ ಅವರು ಮರಳಿ ಕೊಡುವ ವಿಶ್ವಾಸವಿದೆ ಎಂದು ಸ್ವಾಮೀಜಿಗಳು ಅಭಿಪ್ರಾಯ ಪಟ್ಟರು.

ಬಸವಣ್ಣನವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಅಪಪ್ರಚಾರದ ಮಾತನ್ನಾಡುತ್ತಿದ್ದಾರೆ. ಅವುಗಳಿಗೆ ಸರ್ಕಾರ ಗಮನ ಕೊಡದೇ ನೇರವಾಗಿ ಬಸವತತ್ವ ಮತ್ತು ವಚನ ಸಾಹಿತ್ಯವನ್ನು ಗಮನದಲ್ಲಿಟ್ಟುಕೊಂಡು ಲೋಪದೋಷಗಳನ್ನು ತಿದ್ದುಪಡಿ ಮಾಡಬೇಕು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಸ್ವಾಮೀಜಿಗಳು ಒಕ್ಕೊರಲಿನಿಂದ ಆಗ್ರಹಿಸಿದರು.

ಹುಬ್ಬಳ್ಳಿಯ ಮೂರು ಸಾವಿರ ಮಠದ ಡಾ.ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ, ಗದಗ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ, ನಿಡಸೋಸಿ ಮಠದ ಡಾ.ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಬಾಲ್ಕಿ ಹಿರೇಮಠದ ಡಾ.ಬಸವಲಿಂಗ ಪಟ್ಟಾಧ್ಯಕ್ಷರು, ಬಸವಧರ್ಮ ಪೀಠದ ಗಂಗಾ ಮಾತಾಜಿ, ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ, ಮುಂಡರಗಿಯ ನಿಜಗುಣಪ್ರಭು ಸ್ವಾಮೀಜಿ, ಅಥಣಿಯ ಪ್ರಭುಚೆನ್ನಬಸವ ಸ್ವಾಮೀಜಿ, ಗೋಕಾಕನ ಮುರುಘರಾಜೇಂದ್ರ ಸ್ವಾಮೀಜಿ, ಹಾವೇರಿಯ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಚೆನ್ನಮ್ಮನ ಕಿತ್ತೂರಿನ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ಲಿಂಗಸಗೂರಿನ ಸಿದ್ದಲಿಂಗ ಸ್ವಾಮೀಜಿ, ಬಟಕುರ್ಕಿಯ ಬಸವಲಿಂಗ ಸ್ವಾಮೀಜಿ, ಬೆಂಗಳೂರು ಬಸವಧರ್ಮ ಪೀಠದ ಅಕ್ಕ ನಾಗಲಾಂಬಿಕಾ ಮಾತಾಜಿ, ಕಿತ್ತೂರಿನ ಓಂ ಗುರೂಜಿ, ಹಂದಿಗುಂದಿಯ ಶಿವಾನಂದ ಮಹಾಸ್ವಾಮೀಜಿ, ಇಳಕಲ್‌ನ ಗುರುಮಹಾಂತ ಸ್ವಾಮೀಜಿ ಸಭೆಯಲ್ಲಿ ಪಾಲ್ಗೊಂಡಿದ್ದರು.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

07/06/2022 10:38 pm

Cinque Terre

86.5 K

Cinque Terre

2

ಸಂಬಂಧಿತ ಸುದ್ದಿ