ಧಾರವಾಡ: ಪಲಾವ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್, ಎಡಪಕ್ಷಗಳು ಹಾಗೂ ರೈತ ಮುಖಂಡರ ಮಧ್ಯೆ ಜಟಾಪಟಿ ನಡೆದ ಘಟನೆ ಧಾರವಾಡದ ಜ್ಯುಬಿಲಿ ವೃತ್ತದಲ್ಲಿ ನಡೆಯಿತು.
ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಎಲ್ಲ ಪಕ್ಷಗಳು ಪಕ್ಷಾತೀತವಾಗಿ ಈ ಹೋರಾಟ ಮಾಡುತ್ತಿದ್ದರು. ಕಾಂಗ್ರೆಸ್ ಕಾರ್ಯಕರ್ತರು ಕೂಡ ಈ ಬಂದ್ ಗೆ ಬೆಂಬಲ ಸೂಚಿಸಿದ್ದರು. ಜ್ಯುಬಿಲಿ ವೃತ್ತದಲ್ಲಿ ಹೋರಾಟಗಾರರು ಪಲಾವ್ ಕೂಡ ಮಾಡಲು ಆರಂಭಿಸಿದ್ದರು. ಆಗ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ತಮ್ಮ ಪಕ್ಷದ ಟೋಪಿ ಹಾಕಿಕೊಂಡು ಪಲಾವ್ ಮಾಡಲು ಬಂದಿದ್ದೇ ಈ ಜಟಾಪಟಿಗೆ ಕಾರಣವಾಯಿತು.
ಇದು ಪಕ್ಷಾತೀತ ಹೋರಾಟ. ನೀವು ನಿಮ್ಮ ಪಕ್ಷದ ಪರವಾಗಿ ಹೋರಾಟ ಮಾಡುವುದಿದ್ದರೆ ಪ್ರತ್ಯೇಕವಾಗಿ ಮಾಡಿಕೊಳ್ಳಿ. ಕೇವಲ ಪ್ರಚಾರಕ್ಕೆ ನೀವು ಹೋರಾಟಕ್ಕೆ ಬರುವುದು ಬೇಡ. ನೀವು ಬೆಂಬಲ ಕೊಡುವ ಅಗತ್ಯ ಇಲ್ಲ ಎಂದು ಎಡಪಕ್ಷಗಳ ಕಾರ್ಯಕರ್ತರು ಹಾಗೂ ಕೆಲ ರೈತ ಮುಖಂಡರು ಕಾಂಗ್ರೆಸ್ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡರು. ಇದರಿಂದ ಅವರವರ ಮಧ್ಯೆಯೇ ವಾಗ್ವಾದ ಶುರುವಾಯಿತು. ನಂತರ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ನಂತರ ಎಡಪಕ್ಷಗಳ ಕಾರ್ಯಕರ್ತರು ಹಾಗೂ ಕೆಲ ರೈತ ಮುಖಂಡರು ಪ್ರತಿಭಟನಾ ಮೆರವಣಿಗೆ ಮಾಡುತ್ತ ಬಸ್ ನಿಲ್ದಾಣದ ಕಡೆ ಹೋದರೆ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಇನ್ನೂ ಕೆಲ ರೈತ ಮುಖಂಡರು ಧಾರವಾಡದ ಜ್ಯುಬಿಲಿ ವೃತ್ತದಲ್ಲಿ ಪ್ರತ್ಯೇಕವಾಗಿ ಕುಳಿತು ಪ್ರತಿಭಟನೆ ನಡೆಸಿದರು.
Kshetra Samachara
08/12/2020 02:05 pm