ಧಾರವಾಡ: ನೀರಿನಲ್ಲಿ ಹಾಯಾಗಿ ಈಜಾಡಿಕೊಂಡು ತಮ್ಮ ಬದುಕು ಸಾಗಿಸುವ ಮೀನುಗಳು ಇದೀಗ ಮೃತ್ಯು ಲೋಕದ ಕದ ತಟ್ಟುತ್ತಿವೆ. ಈಗಾಗಲೇ ಅದೆಷ್ಟೋ ಮೀನುಗಳು ಉಸಿರು ಚೆಲ್ಲಿ ಹಳ್ಳದ ದಂಡೆಗೆ ಬಂದು ಬಿದ್ದಿವೆ. ಈ ದೃಶ್ಯಗಳನ್ನೊಮ್ಮೆ ನೋಡಿದರೆ ಎಂತವರೂ ಕೂಡ ಅಯ್ಯೋ ಎನ್ನದೇ ಇರಲಾರರು.
ಹೀಗೆ ನೀರಿನ ದಡದಲ್ಲಿ ಬಂದು ಬಿದ್ದಿರುವ ಮೀನುಗಳ ದೃಶ್ಯ ಎಲ್ಲೋ ಕಡಲ ತೀರದಲ್ಲಿ ಸಿಕ್ಕಿದ್ದಲ್ಲ. ಬದಲಿಗೆ ಈ ದೃಶ್ಯ ಕಂಡು ಬಂದದ್ದು ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ಬಳಿ ಇರುವ ತುಪ್ಪರಿ ಹಳ್ಳದಲ್ಲಿ. ತಮ್ಮ ಇಡೀ ಜೀವನವನ್ನು ನೀರಿನಲ್ಲೇ ಕಳೆಯುವ ಮೀನುಗಳು, ಕೊನೆಗೆ ಮೀನುಗಾರ ಹಾಕಿದ ಗಾಳಕ್ಕೆ ಸಿಲುಕಿ ಇನ್ನೊಬ್ಬರಿಗೆ ಆಹಾರವಾಗಿ ಸಾರ್ಥಕ ಬದುಕು ನಡೆಸುತ್ತವೆ. ಆದರೆ, ನೀರಿನ ಮಧ್ಯೆಯೇ ಹರಿದು ಬರುವ ವಿಷಾನಿಲಯುಕ್ತ ನೀರನ್ನು ಕುಡಿದು ತಮ್ಮ ಉಸಿರು ಚೆಲ್ಲುವ ಮೀನುಗಳಿಗೆ ಈ ಸಾವು ನ್ಯಾಯವೇ ಎಂಬ ಪ್ರಶ್ನೆ ಮೂಡುತ್ತದೆ.
ಇಷ್ಟಕ್ಕೂ ಮೀನುಗಳು ಈ ರೀತಿ ಸತ್ತು ಬೀಳುತ್ತಿರುವುದಾದರೂ ಏಕೆ ಅಂತೀರಾ? ಅದಕ್ಕೆ ಕಾರಣ ಅದೊಂದೆ ಸಕ್ಕರೆ ಕಾರ್ಖಾನೆ. ಹೌದು! ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಒಡೆತನದ ಹರ್ಷ ಶುಗರ್ಸ್ ಫ್ಯಾಕ್ಟರಿಯಿಂದ ಕೆಮಿಕಲ್ ಮಿಶ್ರಿತ ತ್ಯಾಜ್ಯವನ್ನು ಅದರ ಪಕ್ಕದ ಹಳ್ಳಕ್ಕೆ ಹರಿಬಿಡಲಾಗುತ್ತಿದೆ. ಅದು ಬೆಳಗಾವಿ ಜಿಲ್ಲೆಯ ಚಿಕ್ಕ ಉಳ್ಳಿಗೇರಿ, ಇನಾಂಹೊಂಗಲದ ಮೂಲಕ ಹಾಯ್ದು ಧಾರವಾಡ ಜಿಲ್ಲೆಯ ಶಿರೂರು ಹಾಗೂ ಆಯಟ್ಟಿ ಗ್ರಾಮಗಳ ಬಳಿಯ ತುಪ್ಪರಿ ಹಳ್ಳ ಸೇರುತ್ತಿದೆ. ಈ ಕೆಮಿಕಲ್ ಹಳ್ಳದಲ್ಲಿ ಸೇರ್ಪಡೆಯಾಗುತ್ತಿರುವುದರಿಂದ ಜಲಚರಗಳು ತಮ್ಮ ಉಸಿರು ಚೆಲ್ಲುತ್ತಿವೆ.
ಸವದತ್ತಿ ಬಳಿ ಲಕ್ಷ್ಮೀ ಹೆಬ್ಬಾಳಕರ ಒಡೆತನದ ಈ ಹರ್ಷ ಶುಗರ್ಸ್ ಕಾರ್ಖಾನೆ ಇದ್ದು, ತುಪ್ಪರಿ ಹಳ್ಳದ ಮೂಲಕ ಕಾರ್ಖಾನೆಯ ತ್ಯಾಜ್ಯ ಬೆಣ್ಣಿ ಹಳ್ಳ ಸೇರಿಕೊಂಡರೆ ಮತ್ತೊಂದು ಅನಾಹುತಕ್ಕೆ ಕಾರಣವಾಗುತ್ತದೆ. ಇನಾಂಹೊಂಗಲ ಹಾಗೂ ಹಾರೋಬೆಳವಡಿ ಮಧ್ಯೆ ಈ ತುಪ್ಪರಿ ಹಳ್ಳ ಹರಿದು ಹೋಗಿದ್ದು, ಈ ಗ್ರಾಮಗಳ ರೈತರಿಗೆ ಇದೇ ಹಳ್ಳ ನೀರಾವರಿ ಮಾಡಿಕೊಳ್ಳಲು ಜೀವನಾಧಾರವಾಗಿದೆ. ಕಾರ್ಖಾನೆಯ ತ್ಯಾಜ್ಯ ಈ ಹಳ್ಳಕ್ಕೆ ಸೇರಿಕೊಳ್ಳುತ್ತಿರುವುದರಿಂದ ಭೂಮಿ ಕೂಡ ವಿಷ ಉಣಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಈ ಹಳ್ಳದ ನೀರನ್ನು ಅಲ್ಲಿನ ರೈತರು ದನ, ಕರುಗಳಿಗೂ ಸಹ ಕುಡಿಯಲು ಕೊಟ್ಟಿರುವುದರಿಂದ ಜಾನುವಾರುಗಳಲ್ಲಿ ಹೊಟ್ಟೆ ಉಬ್ಬುವಿಕೆ ಕಂಡು ಬರುತ್ತಿದೆ. ರಾಜ್ಯ ರಾಜಕಾರಣದಲ್ಲಿ ಸದಾ ಸದ್ದು ಮಾಡಿ ಸುದ್ದಿಯಾಗುತ್ತಿರುವ ಹೆಬ್ಬಾಳಕರ್ ಇಲ್ಲಿ ಮಾತ್ರ ಮತ್ಸ್ಯಗಳಿಗೆ ವಿಷಕನ್ಯೆಯಾಗುತ್ತಿದ್ದಾರೆ. ಇದನ್ನೆಲ್ಲ ತಡೆಯಬೇಕಾದ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಅಧಿಕಾರಿಗಳು ಅದು ನಮ್ಮ ವ್ಯಾಪ್ತಿಗೆ ಬರೋದಿಲ್ಲ ಎನ್ನುತ್ತ ಕಾಲ ಕಳೆಯುತ್ತಿದ್ದಾರೆ. ಹೀಗಾದರೆ ಜನ, ಜಾನುವಾರುಗಳು ಬದುಕುವುದಾದರೂ ಹೇಗೆ ಎಂಬ ಪ್ರಶ್ನೆ ಮೂಡುತ್ತಿದೆ.
Kshetra Samachara
11/02/2021 03:42 pm