ಧಾರವಾಡ: ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ದರ್ಶನ ಮತ್ತು ಸ್ನೇಹಾ ತೆರೆದ ತಂಗುದಾಣದ ಸಹಯೋಗದೊಂದಿಗೆ ಹುಬ್ಬಳ್ಳಿ ಹಾಗೂ ಧಾರವಾಡ ಶಹರದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ 5 ಬಾಲಕಿಯರನ್ನು ರಕ್ಷಿಸಲಾಗಿದೆ. ಹುಬ್ಬಳ್ಳಿ ವಿದ್ಯಾನಗರ ಹತ್ತಿರ ಭಿಕ್ಷಾಟನೆಯಲ್ಲಿ ತೊಡಗಿದ್ದ 5 ಜನ ಬಾಲಕಿಯರನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಆದೇಶದಂತೆ ಹುಬ್ಬಳ್ಳಿಯ ಸ್ನೇಹಾ ತೆರೆದ ತಂಗುದಾಣದಲ್ಲಿ ತಾತ್ಕಾಲಿಕವಾಗಿ ದಾಖಲಿಸಲಾಯಿತು.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ. ಕಮಲಾ ಬೈಲೂರ, ಭಿಕ್ಷಾಟನೆಯನ್ನೆ ವೃತ್ತಿ ಮಾಡಿಕೊಂಡು ಮಕ್ಕಳನ್ನು ಭಿಕ್ಷಾಟನೆಯಲ್ಲಿ ತೊಡಗಿಸುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ, ಈ ಸಾಮಾಜಿಕ ಸಮಸ್ಯೆಯನ್ನು ನಿವಾರಿಸಲು ಮಕ್ಕಳ ರಕ್ಷಣಾ ಘಟಕದಿಂದ ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಗಳನ್ನು ಅವಳಿ ನಗರದಲ್ಲಿ ನಿರಂತರವಾಗಿ ಆಯೋಜಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದಿದ್ದಾರೆ.
ಹುಬ್ಬಳ್ಳಿ ಹಾಗೂ ಧಾರವಾಡದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದ್ದು, ಮಕ್ಕಳ ಭಿಕ್ಷಾಟನೆ ಕಾನೂನು ಬಾಹಿರ. ಮಕ್ಕಳನ್ನು ಭಿಕ್ಷಾಟನೆಗಾಗಿ ಯಾರಾದರೂ ಬಳಸಿಕೊಂಡರೆ ಅಂತಹವರ ವಿರುದ್ಧ ಕಾನೂನಿನಡಿ ಒಂದು ವರ್ಷ ಜೈಲು ಶಿಕ್ಷೆ ಅಥವಾ ದಂಡವನ್ನು ವಿಧಿಸಲಾಗುತ್ತದೆ ಎಂದು ಕಮಲಾ ಬೈಲೂರ ಹೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
16/07/2022 09:04 pm