ಧಾರವಾಡ: ಎಲ್ಲ ಧರ್ಮದವರು ತಮ್ಮ ಧರ್ಮದ ಪವಿತ್ರ ಗ್ರಂಥಗಳನ್ನು ನಂಬುವಂತೆ ಸಂವಿಧಾನವನ್ನು ಪವಿತ್ರ ಗ್ರಂಥವಾಗಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ದೇಶದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಉಮೇಶ ಎಂ.ಅಡಿಗ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ವಕೀಲರ ಸಂಘದ ಸಭಾಭವನದಲ್ಲಿ ಏರ್ಪಡಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲ ದೇಶಗಳಲ್ಲಿರುವ ಸಂವಿಧಾನಗಳನ್ನು ಅಧ್ಯಯನ ಮಾಡಿ, ಅವುಗಳಲ್ಲಿನ ಉತ್ತಮ ಅಂಶಗಳನ್ನು ಅರಿತು ಸಂವಿಧಾನ ರಚನಾ ಕರಡು ಸಮಿತಿಯು ಉತ್ತಮವಾದ ಸಂವಿಧಾನವನ್ನು ರಚಿಸಿದೆ. ಮತ್ತು ಅದು ಜಾರಿಗೆ ಬಂದಿದೆ. ಇದು ಜಗತ್ತಿನ ಅತ್ಯಂತ ಬೃಹತ್ ಸಂವಿಧಾನವಾಗಿದ್ದು, ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸಿದೆ. 2015 ರಿಂದ ನವೆಂಬರ್ 26 ರಂದು ರಾಷ್ಟ್ರೀಯ ದಿನವನ್ನಾಗಿ ಆಚರಿಸಬೇಕೆಂಬ ಆದೇಶದ ಮೇರೆಗೆ ಪ್ರತಿವರ್ಷ ನವೆಂಬರ್ 26 ರಂದು ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಕೊರೊನಾ 3ನೇ ಅಲೆಯು ಸಂಭವವಿರುವುದರಿಂದ ಎಲ್ಲರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕಳೆದ ಎರಡು ವರ್ಷಗಳಲ್ಲಿ ಆತ್ಮೀಯರನ್ನು, ಸಂಬಂಧಿಕರನ್ನು ಕಳೆದುಕೊಂಡು ದುಃಖಿತರಾಗಿದ್ದೇವೆ. ಆದ್ದರಿಂದ ನಮ್ಮ ರಕ್ಷಣೆಗಾಗಿ ನಾವೇ ಹೋರಾಟ ಮಾಡಬೇಕಾಗಿದೆ ಎಂದರು.
2ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಸದಾನಂದ ಸ್ವಾಮಿ ಮಾತನಾಡಿ, ನಾವು ಕಾನೂನನ್ನು ಹೇಗೆ ಗೌರವಿಸುತ್ತೇವೆ ಹಾಗೆಯೇ ಕಾನೂನು ನಮ್ಮನ್ನು ಗೌರವಿಸುತ್ತದೆ. ಸಂವಿಧಾನ ದಿನವನ್ನು ಕೇವಲ ಆಚರಣೆ ಮಾಡದೇ ದಿನನಿತ್ಯ ಸಂವಿಧಾನದ ಉದ್ದೇಶಗಳನ್ನು ಈಡೆರಿಸಲು ಕರ್ತವ್ಯ ನಿರ್ವಹಿಸಬೇಕು ಎಂದರು.
ವಕೀಲ ಸಂಘದ ಅಧ್ಯಕ್ಷ ಬಿ.ಎಸ್. ಗೋಡಸೆ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಹಿರಿಯ ಸಿವಿಲ್ ನ್ಯಾಯಾಧೀಶೆ ಪುಷ್ಪಲತ ಸಿ.ಎಂ., ವಕೀಲರ ಸಂಘದ ಕಾರ್ಯದರ್ಶಿ ಎನ್.ಆರ್.ಮಟ್ಟಿ, ಹಿರಿಯ ಮತ್ತು ಕಿರಿಯ ವಕೀಲರು ಹಾಜರಿದ್ದರು.
Kshetra Samachara
26/11/2021 10:29 pm