ಹುಬ್ಬಳ್ಳಿ: ತಂದೆ ತಾಯಿಂದರು ಕೊಟ್ಟ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಳ್ಳಬೇಡಿ. ಹದಿಹರಿಯದ ವಯಸ್ಸು ಹಾಗೂ ಸಹವಾಸ ದೋಷದಿಂದ ಕಾನೂನಾತ್ಮಕ ಸಮಸ್ಯೆಗಳಲ್ಲಿ ಸಿಲಿಕಿಕೊಳ್ಳದಿರಿ ಎಂದು ಜಿಲ್ಲಾ ನ್ಯಾಯಾಧೀಶ ಹಾಗೂ ಕಾರ್ಮಿಕ ನ್ಯಾಯಾಲಯದ ಅಧ್ಯಕ್ಷಾಧಿಕಾರಿಗಳಾದ ಮಾರುತಿ ಬಾಗಡೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ನಗರದ ಕೆ.ಎಲ್.ಇ. ತಾಂತ್ರಿಕ ವಿದ್ಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ವಾರ್ತಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅತಿ ವೇಗದ ವಾಹನ ಚಾಲನೆ, ಮಾದಕ ವಸ್ತುಗಳ ಸೇವೆನೆಯಂತ ದುಶ್ಚಟಗಳು ಭವಿಷ್ಯವನ್ನು ಹಾಳು ಮಾಡುತ್ತವೆ. ಉನ್ನತ ಜೀವನದ ಕನಸು ಕಂಡು ವಿದ್ಯಾಭ್ಯಾಸದ ಕಡೆ ಗಮನ ಹರಿಸಿ. ಪ್ರೀತಿ ಪ್ರೇಮ ವಿಚಾರಗಳ ಬಗ್ಗೆ ತಲೆಕೆಡಿಸಕೊಳ್ಳಬೇಡಿ. ಸಂವಿಧಾನ ಮೂಲಭೂತ ಹಕ್ಕುಗಳನ್ನು ನೀಡಿದೆ. ಮೂಲಭೂತ ಹಕ್ಕುಗಳ ವಿಚಾರದಲ್ಲೂ ಮಿತಿಗಳಿವೆ.
ಸ್ವಾತಂತ್ರ್ಯ ಸ್ವೇಚ್ಛೆಯಾಗಬಾರದು. ನ್ಯಾಯಾಧೀಶನಾಗಿ ಕರ್ತವ್ಯ ನಿರ್ವಹಿಸುವ ವೇಳೆ ಹಲವು ವಿದ್ಯಾರ್ಥಿಗಳು ಸಹ ಅಪರಾಧ ಪರಕರಣಗಳಲ್ಲಿ ಭಾಗಿಯಾಗಿ ವಿಚಾರಣೆಗೆ ನನ್ನೆದಿರು ಬಂದಿರುವ ಉದಾಹರಣೆಗಳಿವೆ. ಕಾನೂನು ಪ್ರಕಾರ ಶಿಕ್ಷೆಯನ್ನು ವಿಧಿಸಿದ್ದೇನೆ. ಅತಿ ವೇಗವಾಗಿ ವಾಹನ ಚಾಲನೆ ಮಾಡುವ ಮುನ್ನ ನಿಮ್ಮ ತಂದೆ ತಾಯಿಗಳ ಬಗ್ಗೆ ಯೋಚಿಸಿ. ಹುಬ್ಬಳ್ಳಿ ನಗರದಲ್ಲಿ ಹಲವು ವಿದ್ಯಾರ್ಥಿಗಳು ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ಜಾಗರೂಕತೆಯಿಂದ ವಾಹನ ಚಲಾಯಿಸುವುದು ನಿಮ್ಮ ಕರ್ತವ್ಯ. ಸಣ್ಣ ಅಪಘಾತಗಳು ಸಹ ದೊಡ್ಡ ಆರ್ಥಿಕ ತೊಂದರೆ ಕಾರಣವಾಗುತ್ತವೆ.
ತಮಾಷೆ ಮಾಡಲು ಮಿತಿ ಇರಲಿ, ತಮಾಷೆ ಅತಿಯಾದರೆ ಅಪರಾಧವಾಗುತ್ತದೆ. ನಿಮ್ಮ ಸಹಪಾಠಿಗಳೊಂದಿಗೆ ಸೌಜನ್ಯದಿಂದ ವರ್ತಿಸಿ. ಸಂವಿಧಾನ ಹಾಗೂ ಅಗತ್ಯವಾದ ಕಾನೂನುಗಳನ್ನು ಓದಿ ತಿಳಿದುಕೊಳ್ಳಿ ಎಂದು ಸಲಹೆ ನೀಡಿದರು.
Kshetra Samachara
09/11/2021 07:32 pm