ಧಾರವಾಡ: ಬರುವ ಸೆಪ್ಟೆಂಬರ್ 30ರ ಗುರುವಾರದಂದು ಧಾರವಾಡ ಜಿಲ್ಲೆಯಾದ್ಯಂತ ಇರುವ ಜಿಲ್ಲಾ ಮತ್ತು ಎಲ್ಲ ಅಧೀನ ನ್ಯಾಯಾಲಯಗಳಲ್ಲಿ ಮೆಗಾ ಲೋಕ್ ಅದಾಲತ್ ಆಯೋಜಿಸಲಾಗಿದ್ದು, ಈ ಲೋಕ್ ಅದಾಲತ್ ಯಶಸ್ವಿಗೊಳಿಸಲು ಮತ್ತು ಭೂಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಕ್ ಅದಾಲತ್‍ದಲ್ಲಿ ಕ್ರಮ ವಹಿಸುವ ಕುರಿತು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಉಮೇಶ ಅಡಿಗ ಅವರ ಅಧ್ಯಕ್ಷತೆ ಹಾಗೂ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಜಿಲ್ಲಾ ನ್ಯಾಯಾಲಯದ ಸಭಾಭವನದಲ್ಲಿ ಪೂರ್ವಭಾವಿ ಸಭೆಯನ್ನು ಜರುಗಿಸಲಾಯಿತು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಉಮೇಶ ಅಡಿಗ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಾದ್ಯಂತ ಇರುವ ನ್ಯಾಯಾಲಯಗಳಲ್ಲಿ ಭೂ-ಸ್ವಾಧಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಲು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸುವುದರಿಂದ ಎರಡು ಕಡೆಯ ವಾದಿ ಮತ್ತು ಪ್ರತಿವಾದಿಗಳಿಗೆ ಅನುಕೂಲವಾಗುತ್ತದೆ. ಇದರಿಂದ ಹಣ, ಸಮಯ, ಸಂಪನ್ಮೂಲದ ಉಳಿತಾಯ ಮತ್ತು ಸಾಮರಸ್ಯದ ಭಾವನೆ ಪರಸ್ಪರರಲ್ಲಿ ಬೆಳೆದು ಬರಲು ಸಹಾಯವಾಗುತ್ತದೆ. ಕಂದಾಯ, ಹೆಸ್ಕಾಂ, ಮಹಾನಗರಪಾಲಿಕೆ, ವಿಮಾ ಸಂಸ್ಥೆಗಳು, ಬ್ಯಾಂಕ್ ಅಧಿಕಾರಿಗಳು ಈ ಮೆಗಾ ಲೋಕ ಅದಾಲತ್‌ದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿ ಸುಖಾಂತ್ಯಗೊಳಿಸುವಲ್ಲಿ ಸಹಕರಿಸಬೇಕೆಂದು ನ್ಯಾಯಾಧೀಶ ಉಮೇಶ ಅಡಿಗ ಅವರು ಹೇಳಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಮಾತನಾಡಿ, ಜಿಲ್ಲೆಯಾದ್ಯಂತ ನ್ಯಾಯಾಲಯಗಳಲ್ಲಿ ಬಾಕಿ ಇರುವ ಸಂಬಂಧಪಟ್ಟ ಪ್ರಕರಣಗಳಲ್ಲಿ ಕಕ್ಷಿಗಾರರಿಗೆ ಪಾವತಿಸಬೇಕಾದ ಪರಿಹಾರದ ಮೊತ್ತವನ್ನು ಆದಷ್ಟು ಬೇಗನೆ ಪಾವತಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತವಾದ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಮತ್ತು ಭೂಸ್ವಾಧೀನ ಪ್ರಕರಣಗಳಲ್ಲಿ ಆದಷ್ಟು ಬೇಗ ಕ್ರಮಕೈಗೊಂಡು ದಾವೆಗಳನ್ನು ಅಂತಿಮಗೊಳಿಸುವುದರಿಂದ ಸರ್ಕಾರವು ಕಕ್ಷಿಗಾರರಿಗೆ ಪಾವತಿಸಬೇಕಾದ ಬಡ್ಡಿಯ ಹಣದ ಹೆಚ್ಚಿನ ಹೊರೆಯನ್ನು ಕಡಿಮೆಗೊಳಿಸಿದಂತಾಗುತ್ತದೆ. ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಮೆಗಾ ಲೋಕ್ ಅದಾಲತ್ ಕಾರ್ಯಕ್ರಮವು ಒಂದು ಸುವರ್ಣ ಅವಕಾಶವಾಗಿದೆ. ಭೂಸ್ವಾಧೀನ ಪ್ರಕರಣಗಳ ಕುರಿತ ಸಂಪೂರ್ಣ ಮಾಹಿತಿಯನ್ನು ತಮಗೆ ಒದಗಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಸಿ.ಸದಾನಂದಸ್ವಾಮಿ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸಿಜೆಎಮ್ ಸಂಜಯ ಪಿ. ಗುಡಗುಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಷ್ಪಲತ ಸಿ.ಎಮ್, ಮತ್ತು 2ನೇ ಅಧಿಕ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜೆಎಮ್‍ಎಫ್‍ಸಿ ಮರಿಯಪ್ಪ ಹಾಗೂ ಜಿಲ್ಲೆಯಾದ್ಯಂತ ಇರುವ ಭೂಸ್ವಾಧೀನಕ್ಕೆ ಸಂಬಂಧಿಸಿದ ದಾವೆಗಳನ್ನು ಹೊಂದಿರುವ ನ್ಯಾಯಾಲಯಗಳ ನ್ಯಾಯಾಧೀಶ ಹಾಗೂ ಧಾರವಾಡ ಉಪವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ ಬಿ., ವಿವಿಧ ಇಲಾಖೆಯ ಅಧಿಕಾರಗಳು ಹಾಗೂ ಕಕ್ಷಿದಾರರ ಪರವಾಗಿ ಹಾಜರಾಗುವ ನ್ಯಾಯವಾದಿಗಳು ಪಾಲ್ಗೊಂಡಿದ್ದರು.
Kshetra Samachara
15/09/2021 10:18 pm