ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದಲ್ಲಿ ಆರಂಭವಾಯ್ತು ಮಕ್ಕಳ ಸ್ನೇಹಿ ನ್ಯಾಯಾಲಯ

ಧಾರವಾಡ: ರಾಜ್ಯದಲ್ಲಿ ಪೋಕ್ಸೋ ಕಾಯ್ದೆ ಸೇರಿದಂತೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅನುದಾನದಲ್ಲಿ ಧಾರವಾಡದ ಸಿವಿಲ್ ನ್ಯಾಯಾಲಯ ಆವರಣದಲ್ಲಿ ಸಿದ್ಧಗೊಳಿಸಿರುವ ಮಕ್ಕಳ ಸ್ನೇಹಿ ನ್ಯಾಯಾಲಯವನ್ನು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಧಾರವಾಡ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಶ್ರೀನಿವಾಸ ಹರೀಶ ಕುಮಾರ ಅವರು ಇಂದು ಉದ್ಘಾಟಿಸಿದರು.

ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅನುದಾನದಡಿ ಮೊದಲ ಹಂತವಾಗಿ ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಮಕ್ಕಳ ಸ್ನೇಹಿ ನ್ಯಾಯಾಲಯಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಪೂರೈಸಲಾಗುತ್ತಿದೆ. ಅದರಂತೆ ಧಾರವಾಡ ಸಿವಿಲ್ ನ್ಯಾಯಾಲಯ ಆವರಣದಲ್ಲಿ ಸಿದ್ಧಗೊಂಡಿರುವ ಮಕ್ಕಳ ಸ್ನೇಹಿ ನ್ಯಾಯಾಲಯದಲ್ಲಿ ಸಂತ್ರಸ್ಥ ಮಗುವಿಗೆ ಪ್ರತ್ಯೇಕ ಕೊಠಡಿ, ಆರೋಪಿತನಿಗೆ ಬೇರೆ ಕೊಠಡಿ, ಮಕ್ಕಳ ಶೌಚಾಲಯ, ಅಡುಗೆ ಮನೆ, ಅಗತ್ಯವಿದ್ದಲ್ಲಿ ಮಗುವಿನ ಪಾಲಕರಿಗೆ ರಾತ್ರಿ ವೇಳೆ ಉಳಿಯಲು ಕೊಠಡಿ, ಕಟ್ಟಡ ಆವರಣದಲ್ಲಿ ಮಕ್ಕಳಿಗಾಗಿ ಆಟದ ಮೈದಾನ, ಮಕ್ಕಳ ಪಾಲಕರಿಗೆ ಪ್ರತ್ಯೇಕ ಕೊಠಡಿ, ವೀಡಿಯೋ ಕಾನ್ಫರೆನ್ಸ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ, ಮಕ್ಕಳಿಗಾಗಿ ಗ್ರಂಥಾಲಯ, ವರ್ಣಮಾಲೆ ಅಕ್ಷರಗಳಿರುವ ಚಾಪೆ (ಮ್ಯಾಟ್)ಗಳ ವ್ಯವಸ್ಥೆ, ಫ್ರಿಜ್, ನ್ಯಾಯಾಧೀಶರ ಕೋರ್ಟ ಹಾಲ್ ಹಾಗೂ ನ್ಯಾಯಾಧೀಶರಿಗೆ ಪ್ರತ್ಯೇಕ ಕೊಠಡಿ, ನಿರ್ವಹಣೆಗೆ ಸಿಬ್ಬಂದಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಹೈಕೋರ್ಟ್ ನ್ಯಾಯಮೂರ್ತಿಗಳು ಮಕ್ಕಳ ಸ್ನೇಹಿ ನ್ಯಾಯಾಲಯದ ಉದ್ಘಾಟನೆಯ ನಂತರ ಪ್ರತಿ ಸೌಲಭ್ಯಗಳನ್ನು ಖುದ್ದಾಗಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಉಮೇಶ ಅಡಿಗ, ಎರಡನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ಮತ್ತು ಪೋಕ್ಸೋ ಪ್ರಕರಣಗಳ ವಿಶೇಷ ನ್ಯಾಯಾಧೀಶೆ ಎಂ. ಪಂಚಾಕ್ಷರಿ, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ಎಸ್.ಚಿಣ್ಣನ್ನವರ, ಸಿ.ಜೆ.ಎಮ್.ನ್ಯಾಯಾಧೀಶ ಸಂಜಯ ಗುಡಗುಡಿ, ಧಾರವಾಡ ವಕೀಲರ ಸಂಘದ ಅಧ್ಯಕ್ಷ ಬಿ.ಎಸ್.ಗೋಡ್ಸೆ, ರಾಜ್ಯ ವಕೀಲರ ಪರಿಷತ್ ಸದಸ್ಯರಾದ ವಿ.ಡಿ.ಕಾಮರಡ್ಡಿ ಸೇರಿದಂತೆ ಧಾರವಾಡ ಜಿಲ್ಲೆಯ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು, ವಿವಿಧ ತಾಲೂಕುಗಳ ನ್ಯಾಯಾಧೀಶರು ಈ ಸಂದರ್ಭದಲ್ಲಿದ್ದರು.

Edited By : Manjunath H D
Kshetra Samachara

Kshetra Samachara

13/02/2021 03:09 pm

Cinque Terre

27.26 K

Cinque Terre

1

ಸಂಬಂಧಿತ ಸುದ್ದಿ