ಧಾರವಾಡ: ಕೊಲೆಯಾದ ವ್ಯಕ್ತಿಯ ಶವ ಮುಚ್ಚಿಟ್ಟು ಸಾಕ್ಷಿ ನಾಶಕ್ಕೆ ಯತ್ನಿಸಿದ ಮತ್ತು ಘಟನೆ ಕುರಿತು ಮಾಹಿತಿ ನೀಡದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಧಾರವಾಡದ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಶಿಕ್ಷೆಯ ಪ್ರಮಾಣವನ್ನು ಜ.4 ಕ್ಕೆ ಪ್ರಕಟಿಸಲಿದೆ. 2015ರ ಜೂನ್ 9ರಂದು ನಡೆದ ಕೊಲೆ ಆರೋಪ ತನ್ನ ಮೇಲೆ ಬರುತ್ತದೆ ಎಂದು ಮಾರುತಿ ಬಡಿಗೇರ ಶವವನ್ನು ಎಲೆಗಳಲ್ಲಿ ಮುಚ್ಚಿಟ್ಟಿದ್ದಲ್ಲದೆ, ಘಟನೆ ಕುರಿತು ಸಂಬಂಧಿಸಿದ ಠಾಣೆಗೆ ಮಾಹಿತಿ ನೀಡಿರಲಿಲ್ಲ.
ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣಾ ಪೊಲೀಸರು ಶರೀಫಸಾಬ್ ಮತ್ತು ಮಾರುತಿ ಬಡಿಗೇರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಎಂ. ಪಂಚಾಕ್ಷರಿ, ಮಾರುತಿ ಬಡಿಗೇರಿ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರ ಸರೋಜಾ ಹೊಸಮನಿ ವಾದ ಮಂಡಿಸಿದ್ದರು.
2015ರ ಜೂನ್ 9ರಂದು ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಭುನಗರ-ಹೊನ್ನಾಪುರ ಗ್ರಾಮದ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಶರೀಫಸಾಬ್ ಅಮ್ಮಿನಬಾವಿ ಎಂಬಾತ ಪ್ರೇಯಸಿಯೊಂದಿಗೆ ಬಂದಾಗ ಮಾರುತಿ ಬಡಿಗೇರ ಮತ್ತು ಶಶಿಕಾಂತ ಬಡಿಗೇರ ಎಂಬುವರು ಅವರನ್ನು ಬೆದರಿಸಿ, ಹಣ ವಸೂಲಿ ಮಾಡಲು ಯತ್ನಿಸಿದ್ದರು.
ಈ ವೇಳೆ ಮಾರುತಿ ಬಡಿಗೇರ ಕೈಯಲ್ಲಿದ್ದ ಚಾಕುವನ್ನು ಶರೀಫಸಾಬ್ ಕಸಿದುಕೊಂಡು ಶಶಿಕಾಂತನ ಎದೆ, ಹೊಟ್ಟೆಗೆ ತಿವಿದು ಕೊಲೆ ಮಾಡಿದ್ದನು.
Kshetra Samachara
01/01/2021 08:47 am