ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿ ನಗರವೂ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗಾಂಜಾ, ಡ್ರಗ್ಸ್ ಸೇರಿದಂತೆ ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ಮುಂದುವರೆದಿದೆ. ಆದ್ರೆ ಪೊಲೀಸರ ಕಾರ್ಯಾಚರಣೆಯಿಂದ ಎಚ್ಚೆತ್ತುಕೊಂಡಿರುವ ಧಂದೆಕೋರರನ್ನಹ ಬಂಧಿಸಲು ಪೊಲೀಸರು ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿ ನಾಲ್ವರನ್ನ ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.
ಬೆಂಡಿಗೇರಿ ಠಾಣೆ ಪೊಲೀಸರು ಹಲವು ದಿನಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಗಾಂಜಾ ಮಾರಾಟ ಮಾಡುತ್ತಿದ್ದವರನ್ನ ಬೆನ್ನು ಬಿದ್ದಿದ್ದರು. ಹೀಗಾಗಿ ಪೊಲೀಸರು ಕಳೆದ ಎರಡು ದಿನಗಳಿಂದಲೂ ಮಾರು ವೇಷದಲ್ಲಿ ಅಲೆದಾಡುತ್ತಿದ್ದರು. ಗ್ರಾಹಕರ ಸೋಗಿನಲ್ಲಿದ್ದ ಆರಕ್ಷಕರ ಬಲೆಗೆ ಕೊನೆಗೂ ನಾಲ್ಕು ಜನರು ಸಿಕ್ಕಿ ಬಿದ್ದಿದ್ದಾರೆ.
ಬೆಂಡಿಗೇರಿ ಠಾಣೆಯ ವ್ಯಾಪ್ತಿಯಲ್ಲೇ ತಮ್ಮ ಗಾಂಜಾವನ್ನ ಮಾರಾಟ ಮಾಡುತ್ತಿದ್ದ ಇವರಿಂದ 1ಕೆಜಿಗೂ ಹೆಚ್ಚು ಗಾಂಜಾವನ್ನ ವಶಕ್ಕೆ ಪಡೆಯಲಾಗಿದ್ದು, ಬಂಧಿತರು ಹುಬ್ಬಳ್ಳಿಯ ವೀರಾಪುರ ಓಣಿ, ಗಣೇಶಪೇಟೆ ಹಾಗೂ ಸೆಟ್ಲಮೆಂಟಿನ ನಿವಾಸಿಗಳೆಂದು ತಿಳಿದು ಬಂದಿದೆ.
ಬೆಂಡಿಗೇರಿ ಪೊಲೀಸರ ಈ ಕಾರ್ಯಾಚರಣೆ ಮತ್ತಷ್ಟು ದಂಧೆಕೋರರಲ್ಲಿ ನಡುಕ ಹುಟ್ಟಿಸಿದ್ದು, ಗಾಂಜಾ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆ ಮಾಡುವವರಿಗೆ ಚಳಿ ಬಿಡಿಸಿದಂತಾಗಿದೆ.
Kshetra Samachara
26/09/2020 06:10 pm