ಧಾರವಾಡ: ಚಿತ್ರದುರ್ಗದ ಮುರುಘಾ ಶರಣರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ಬೆನ್ನಲ್ಲೇ ಆಡಿಯೋ ಒಂದು ವೈರಲ್ ಆಗಿದೆ. ಯಾವ ಮಠದಲ್ಲೂ ಮಹಿಳೆಯರಿಗೆ ರಕ್ಷಣೆ ಇಲ್ಲ. ಎಲ್ಲ ಮಠಾಧೀಶರೂ ಅವರೇ ಎಂದು ಸತ್ಯಕ್ಕ ಎಂಬ ಗೃಹಿಣಿಯೊಬ್ಬರು ಹೇಳಿದ್ದು, ಆ ಆಡಿಯೋದಲ್ಲಿ ಇದೀಗ ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ಗುರುಬಸವ ಮಹಾಮನೆಯ ಬಸವಾನಂದ ಸ್ವಾಮೀಜಿಗಳ ಹೆಸರೂ ಪ್ರಸ್ತಾಪವಾಗಿದೆ. ಈ ಸಂಬಂಧ ಬಸವಾನಂದ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು, ನನ್ನ ಮೇಲೆ ಸತ್ಯಕ್ಕ ಮಾಡಿದ ಆರೋಪ ಸತ್ಯಕ್ಕೆ ದೂರವಾದದ್ದು, ಆಕೆ ಮನೋರೋಗಿ ಎಂದಿದ್ದಾರೆ.
ಹೌದು! ಚಿತ್ರದುರ್ಗ ಮುರುಘಾ ಶರಣರ ಘಟನೆ ನಂತರ ಒಂದೊಂದೇ ಪ್ರಕರಣಗಳು ಹೊರ ಬರುತ್ತಿವೆ. ಸತ್ಯಕ್ಕ ಹಾಗೂ ರುದ್ರಮ್ಮ ಎಂಬುವವರು ಫೋನಿನ ಮೂಲಕ ಸಂಭಾಷಣೆ ನಡೆಸಿದ್ದಾರೆ. ಈ ಸಂಭಾಷಣೆಯಲ್ಲಿ ಸತ್ಯಕ್ಕ ವಿವಿಧ ಮಠಾಧೀಶರ ಹೆಸರನ್ನು ಪ್ರಸ್ತಾಪ ಮಾಡಿ ಇವರಾರೂ ಸರಿಯಿಲ್ಲ ಎಂದಿದ್ದಾರೆ.
ಸದ್ಯ ಮಠದಲ್ಲೇ ಆತ್ಮಹತ್ಯೆಗೆ ಶರಣಾದ ನೇಗಿನಹಾಳ ಮಠದ ಸ್ವಾಮೀಜಿಯ ಹೆಸರನ್ನೂ ಸತ್ಯಕ್ಕ ಪ್ರಸ್ತಾಪ ಮಾಡಿದ್ದಾರೆ. ಹೀಗಾಗಿಯೇ ಮನನೊಂದು ನೇಗಿನಹಾಳ ಸ್ವಾಮೀಜಿ ಆತ್ಮಹತ್ಯೆಗೆ ಶರಣಾದರು ಎಂಬ ಸಂಶಯ ವ್ಯಕ್ತಪಡಿಸಲಾಗಿದೆ. ಸತ್ಯಕ್ಕ ಮಾಡಿದ ಆರೋಪದಲ್ಲಿ ಮನಗುಂಡಿಯ ಗುರು ಬಸವ ಮಹಾಮನೆಯ ಬಸವಾನಂದ ಸ್ವಾಮೀಜಿಯ ಹೆಸರೂ ಇದ್ದು, ಈ ಆರೋಪವನ್ನು ಬಸವಾನಂದ ಸ್ವಾಮೀಜಿ ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ಹಾಗಾದ್ರೆ, ಸ್ವಾಮೀಜಿ ಏನು ಹೇಳಿದ್ದಾರೆ ಕೇಳೋಣ ಬನ್ನಿ...
ಸತ್ಯಕ್ಕ ಮೂಲತಃ ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದವಳೇ ಆಗಿದ್ದು, ಸದ್ಯ ತಮಿಳುನಾಡಿನಲ್ಲಿ ನೆಲೆಸಿದ್ದಾಳೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಆಡಿಯೋದಿಂದಲೇ ಮನನೊಂದು ನೇಗಿನಹಾಳ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರಬಹುದು. ಇದೇನು ಅಷ್ಟೊಂದು ಗುರುತರವಾದ ಆರೋಪವಾಗಿರಲಿಲ್ಲ. ಇದನ್ನು ಸ್ವಾಮೀಜಿಗಳು ಎದುರಿಸಬಹುದಿತ್ತು. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಬಸವಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/09/2022 06:09 pm