ಧಾರವಾಡ: ಪೊಲೀಸ್ ಇಲಾಖೆಗೆ ಗೃಹ ರಕ್ಷಕದಳದ ಸೇವೆ ಅಮೂಲ್ಯವಾಗಿದೆ. ಈ ಸಿಬ್ಬಂದಿ ಸೇವೆಗೆ ಇಲಾಖೆ ಹಾಗೂ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಹೇಳಿದರು.
ಅವರು ಇಂದು ಬೆಳಿಗ್ಗೆ ಧಾರವಾಡ ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ ನಗರದ ಜಿಲ್ಲಾ ಗೃಹ ರಕ್ಷಕ ದಳದ ಕಚೇರಿಯಲ್ಲಿ ಏರ್ಪಡಿಸಿದ್ದ 58ನೇ ಅಖಿಲ ಭಾರತ ಗೃಹರಕ್ಷಕ ದಳದ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು,
ಗೃಹ ರಕ್ಷಕ ದಳದ ಸಿಬ್ಬಂದಿ ತಮ್ಮ ಕರ್ತವ್ಯವನ್ನು ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಮಾಡುತ್ತಾರೆ. ಪೊಲೀಸರ ಕಾರ್ಯದಷ್ಟೇ ಅವರ ಕಾರ್ಯ ಸಮನಾಗಿರುತ್ತದೆ.
ಪೊಲೀಸ್ ಸಿಬ್ಬಂದಿ ಕಡಿಮೆ ಇದ್ದಾಗ ಚುನಾವಣೆ ಹಾಗೂ ಇತರೆ ತುರ್ತು ಸಂದರ್ಭದಲ್ಲಿ ಕರ್ತವ್ಯಕ್ಕೆ ನಿಯೋಜಿಸಿಕೊಂಡು ಸೇವೆಗೆ ಬಳಸಿಕೊಳ್ಳಲಾಗುತ್ತದೆ. ಪೊಲೀಸ್ ಇಲಾಖೆಗೆ ಗೃಹ ರಕ್ಷಕ ದಳದ ಸಿಬ್ಬಂದಿ ಇದ್ದಾರೆಂಬುದು ನೈತಿಕ ಧೈರ್ಯ ತರುತ್ತದೆ.
ಗೃಹ ರಕ್ಷಕ ದಳದ ಸಿಬ್ಬಂದಿ ತಮಗೆ ವಹಿಸಿದ ಕೆಲಸವನ್ನು ಚಾಚೂ ತಪ್ಪದೆ ಮಾಡುತ್ತಾರೆ. ಸಮವಸ್ತ್ರವನ್ನು ಧರಿಸಿ ಸಮಾಜಕ್ಕೆ ಉತ್ತಮ ಸೇವೆ ನೀಡುತ್ತಾ ಪೊಲೀಸ್ ಇಲಾಖೆಗೆ ಸಹಕಾರ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.
ಜಿಲ್ಲಾ ಗೃಹ ರಕ್ಷಕ ದಳದ ನಿವೃತ್ತ ಡೆಪ್ಯೂಟಿ ಕಮಾಂಡರ್ ಬಿ.ಆರ್.ಕಂದಗಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಪೊಲೀಸ್ ಇಲಾಖೆಯೊಂದಿಗೆ ಗೃಹರಕ್ಷಕ ದಳದ ಸಿಬ್ಬಂದಿಯೂ ಉತ್ತಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಗೃಹ ರಕ್ಷಕರು ಸಮಾಜದಲ್ಲಿ ಶಿಸ್ತನ್ನು ಕಾಪಾಡಲು ಶ್ರಮಿಸುತ್ತಿದ್ದಾರೆ ಎಂದರು.
Kshetra Samachara
17/12/2020 02:29 pm