ಧಾರವಾಡ: ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ಇಂದು ಬೆಳ್ಳಂ ಬೆಳಿಗ್ಗೆ ತಮ್ಮ ವಶಕ್ಕೆ ಪಡೆದಿದ್ದಾರೆ.
ಕಳೆದ ಒಂದು ವರ್ಷದಿಂದ ಸಿಬಿಐ, ಯೋಗಿಶಗೌಡ ಗೌಡರ ಕೊಲೆ ಪ್ರಕರಣದ ತನಿಖೆ ನಡೆಸುತ್ತಿತ್ತು. ಈ ಸಂಬಂಧ ನಿಜವಾದ ಸುಪಾರಿ ಹಂತಕರನ್ನೂ ಸಿಬಿಐ ಅಧಿಕಾರಿಗಳು ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿದ್ದರು.
ಈ ಹಿಂದೆ ಸಿಬಿಐ ಅಧಿಕಾರಿಗಳು ವಿನಯ ಕುಲಕರ್ಣಿ ಅವರ ಸಹೋದರ ವಿಜಯ ಕುಲಕರ್ಣಿ ಅವರನ್ನೂ ವಿಚಾರಣೆ ನಡೆಸಿದ್ದರು. ಹಲವು ಅಧಿಕಾರಿಗಳು ಹಾಗೂ ಹಲವು ರಾಜಕೀಯ ಮುಖಂಡರನ್ನೂ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದರು.
ಕೊಲೆಗೆ ಸುಪಾರಿ ಕೊಟ್ಟವರ ಬಗ್ಗೆ ಸಿಬಿಐ ಹಲವು ಆಯಾಮಗಳಲ್ಲಿ ವಿಚಾರಣೆ ನಡೆಸಿತ್ತು. ಇದೀಗ ಈ ಕೊಲೆ ಪ್ರಕರಣದ ಭಾಗಿಯಾಗಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ಅವರನ್ನು ತಮ್ಮ ವಶಕ್ಕೆ ಪಡೆದು ಧಾರವಾಡದ ಉಪನಗರ ಠಾಣೆಗೆ ಹೆಚ್ಚಿನ ವಿಚಾರಣೆಗೆ ಕರೆತಂದಿದ್ದಾರೆ.
ಬೆಳ್ಳಂಬೆಳಿಗ್ಗೆ ಬಾರಾಕೊಟ್ರಿಯಲ್ಲಿರುವ ವಿನಯ್ ಅವರ ಮನೆಗೆ ತೆರಳಿದ ಸಿಬಿಐ ಅಧಿಕಾರಿಗಳು, ಅವರನ್ನು ಉಪನಗರ ಠಾಣೆಗೆ ಕರೆತಂದಿದ್ದಾರೆ. ವಿನಯ್ ಕುಲಕರ್ಣಿ ಅವರ ಹುಟ್ಟುಹಬ್ಬದ ಮುನ್ನಾ ದಿನವೇ ಅವರನ್ನು ಸಿಬಿಐ ವಶಕ್ಕೆ ಪಡೆದಿದೆ.
Kshetra Samachara
05/11/2020 09:08 am