ಕಲಘಟಗಿ: ಕನ್ನಡ ನಾಡುನುಡಿ ಶ್ರೇಷ್ಠವಾಗಿದ್ದು,ಕಲೆಯ ಪೋಷಕರು ಇರುವ ವರೆಗೆ ಕಲೆ ಜೀವಂತವಾಗಿ ಇರಲಿದೆ ಎಂದು ಜಾನಪದ ಕಲಾವಿದ ಹಾಗೂ ಜಾನಪದ ಅಕಾಡೆಮಿ ಮಾಜಿ ಸದಸ್ಯ ಇಮಾಮಸಾಹೇಬ ವಲ್ಲೆಪ್ಪನವರ ನುಡಿದರು.ಅವರು ತಾಲೂಕಿನ ಮುಕ್ಕಲ್ ನಂದೇಶ್ವರಮಠದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಆತ್ಮನಂದಾ ಕಲಾ ಬಳಗದಿಂದ ಜರುಗಿದ ಜನಪದ ಸಂಭ್ರಮದಲ್ಲಿ ಮಾತನಾಡಿದರು.
ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವದಿಂದ ಜನಪದ ಕಲೆಗಳು ನಶಿಸಿ ಹೋಗುತ್ತಿವೆ ಗ್ರಾಮೀಣ ಪ್ರದೇಶದಲ್ಲಿ ಸಣ್ಣಾಟ, ದೊಡ್ಡಾಟ,ನಾಟಕಗಳು ಕಣ್ಮರೆಯಾಗಿವೆ ಎಂದು ಮಾತೃ ಭೂಮಿ ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ರಮೇಶ ಸೋಲಾರಗೋಪ್ಪ ನುಡಿದರು. ಗ್ರಾ ಪಂ ಸದಸ್ಯ ಶ್ರೀಕಾಂತ ಪಾಟೀಲ ಮಾತನಾಡಿ,ಜನಪದ ಗ್ರಾಮೀಣ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಿ ಸರ್ಕಾರದಿಂದ ಸಿಗುವ ಮಾಸಾಶನ ಸಿಗುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡಬೇಕಿದೆ ಎಂದರು.
ಆತ್ಮನಂದಾ ಕಲಾ ಬಳಗ ವತಿಯಿಂದ ಜಾನಪದ ಗೀತೆಗಳು ಹಾಗೂ ಜನ ಜಾಗೃತಿ ಗೀತೆಗಳು, ಬಸವಣ್ಣನ ಕಿರು ನಾಟಕ ಪ್ರದರ್ಶನ ಜರುಗಿತು.ಸಮಾಜ ಸೇವೆಯನ್ನು ಗುರುತಿಸಿ ಪ್ರಭುಲಿಂಗ ರಂಗಾಪೂರಗೆ,ಈಶ್ವರ ಜವಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಪಕ್ಕೀರೇಶ್ವರ ಮಹಾ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.ಗ್ರಾ ಪಂ ಅಧ್ಯಕ್ಷ ಲಿಂಗರಡ್ಡಿ ನಡುವಿನಮನಿ,ಉಪಾಧ್ಯಕ್ಷ ಶ್ರೀಕಾಂತ ಪಾಟೀಲ,ಗೂಳಪ್ಪ, ವಿಜಯ,ಸಾಗರ, ನಿಂಗಪ್ಪ ದೂಡ್ಡಪೂಜಾರ,ಎಸ್ ಎನ್ ಅಮರಶೆಟ್ಟಿ, ದ್ಯಾಮಪ್ಪ ದೊಡ್ಡಪೂಜಾರ, ಪುಂಡಲೀಕ ಯಲ್ಲಾರಿ ಉಪಸ್ಥಿತರಿದ್ದರು.
Kshetra Samachara
19/10/2021 08:34 pm