ಹುಬ್ಬಳ್ಳಿ: ಅಡುಗೆ ಅನಿಲ ಖಾಲಿ ಆಯ್ತು ಎಂದರೇ ಕೆಲಸ ಕಾರ್ಯವನ್ನೆಲ್ಲ ಬಿಟ್ಟು ಸಿಲಿಂಡರ್ ಅಂಗಡಿ ಮುಂದೆ ನಿಂತು ಸಿಲಿಂಡರ್ ಪಡೆದುಕೊಂಡ ಬರುವ ಕಾರ್ಯಕ್ಕೆ ಈಗ ಫುಲ್ ಸ್ಟಾಪ್ ನೀಡುವ ಸಮಯ ಸಮೀಪಿಸುತ್ತಿದೆ.
ಹೌದು. ಪ್ರತಿ ಮನೆ-ಮನೆಗೆ ನೇರ ಅಡುಗೆ ಅನಿಲ ಪೂರೈಕೆ ಕಾಮಗಾರಿ ಸದ್ದಿಲ್ಲದೇ ನಡೆಯುತ್ತಿದ್ದು, ವರ್ಷಾಂತ್ಯಕ್ಕೆ ಅವಳಿ ನಗರದಲ್ಲಿ ಬರೋಬ್ಬರಿ 25 ಸಾವಿರ ಮನೆಗಳಿಗೆ ಪಿಎನ್‌ಜಿ (ಪೈಪ್ಡ್ ನ್ಯಾಚುರಲ್ ಗ್ಯಾಸ್) ಪೂರೈಕೆ ಮಾಡುವ ಗುರಿ ಹೊಂದಲಾಗಿದೆ. ಈ ಮೂಲಕ ಅವಳಿ ನಗರದ ಜನತೆಗೆ ಪದೇ-ಪದೇ ಸಿಲಿಂಡರ್ ತುಂಬಿಸುವ ಕೆಲಸ ತಪ್ಪಲಿದೆ.
ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಇಂಡಿಯನ್ ಆಯಿಲ್ ಅದಾನಿ ಗ್ಯಾಸ್ ಪ್ರೈ. ಲಿ. (ಐಒಎಜಿ) 2017-18 ರಿಂದ ನಡೆಸುತ್ತಿರುವ ಮನೆಮನೆಗೆ ಅಡುಗೆ ಅನಿಲ ಪೂರೈಕೆ ಕಾಮಗಾರಿ ಸಾಂಗವಾಗಿ ಸಾಗುತ್ತಿದೆ. ಕಳೆದ 2019ರ ಫೆ. 10ರಂದು ಹುಬ್ಬಳ್ಳಿಗೆ ಆಗಮಿಸಿದ್ದ ಪ್ರಧಾನಿ ಮೋದಿ ನವನಗರದಲ್ಲಿ ಸುಮಾರು 500 ಮನೆಗಳಿಗೆ ಪಿಎನ್‌ಜಿ ಪೂರೈಕೆಗೆ ಚಾಲನೆ ನೀಡಿದ್ದರು. ಇದೀಗ ಹುಬ್ಬಳ್ಳಿ-ಧಾರವಾಡದ 7 ಸಾವಿರ ಮನೆಗಳು ಎಲ್‌ಪಿಜಿಯಿಂದ ಪಿಎನ್‌ಜಿಗೆ ಬದಲಾಗಿವೆ. ಸಿಲಿಂಡರ್ ಗ್ಯಾಸ್‌ಗಿಂತ ಸುರಕ್ಷಿತ ಹಾಗೂ ಅಗ್ಗದ ದರ ಎಂಬ ಭಾವನೆ ಜನರಲ್ಲಿ ಮೂಡಿರುವ ಕಾರಣ ಪಿಎನ್‌ಜಿಗೆ ನಗರದಲ್ಲಿ ಬೇಡಿಕೆಯೂ ಹೆಚ್ಚುತ್ತಿದೆ.
ಮೇ ಅಂತ್ಯದೊಳಗೆ ಹುಬ್ಬಳ್ಳಿಯ ವಸಂತ ನಗರ, ಬದಾಮಿ ನಗರ, ಬೆಂಗೇರಿ ಶಿರೂರ ಪಾರ್ಕ್, ಡಾಲರ್ಸ್ ಕಾಲೋನಿ, ರವಿ ನಗರ, ಅಧ್ಯಾಪಕ ನಗರ, ರೇಣುಕಾ ನಗರ ಹಾಗೂ ಧಾರವಾಡದಲ್ಲಿ ಗಾಂಧಿ ನಗರ ಹಾಗೂ ಶೆಟ್ಟರ್ ಕಾಲೋನಿ ಸೇರಿದಂತೆ ಇತರೆಡೆ ಪಿಎನ್‌ಜಿ ಪೂರೈಕೆಯಾಗಲಿದೆ. ಈಗಾಗಲೇ ಇಲ್ಲಿ ಪೈಪ್‌ಲೈನ್‌ಗಳ ಸಂಪರ್ಕ ಕಾಮಗಾರಿಗಳಿಗೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೊದಲ ಹಂತವಾಗಿ ಮೇ ಅಂತ್ಯಕ್ಕೆ 19 ಸಾವಿರ ಹಾಗೂ ವರ್ಷಾಂತ್ಯಕ್ಕೆ ಬರೋಬ್ಬರಿ 25 ಸಾವಿರ ಮನೆಗಳಿಗೆ ಪಿಎನ್‌ಜಿ ( ಪೈಪ್ಡ್ ನ್ಯಾಚುರಲ್ ಗ್ಯಾಸ್) ಸಂಪರ್ಕ ಕಲ್ಪಿಸುವ ಗುರಿ ಇದೆ.
ಈ ಯೋಜನೆಯಿಂದ ಅಂದಾಜು 12,500 ಮನೆಗಳು ಎಲ್‌ಪಿಜಿಯಿಂದ ಪಿಎನ್‌ಜಿಗೆ ಬದಲಾಗುವ ಸಾಧ್ಯತೆ ಇದೆ. ಸದ್ಯ ನಗರದ 350 ಕಿ.ಮೀ.ನಲ್ಲಿ ಇದರ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡಿದ್ದು, 2021ರ ಅಂತ್ಯಕ್ಕೆ 550 ಕಿ.ಮೀ. ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳ್ಳಲಿದೆ. ಒಟ್ಟಾರೆಯಾಗಿ ವರ್ಷಾಂತ್ಯಕ್ಕೆ ಅವಳಿ ನಗರದಲ್ಲಿ 25 ಸಾವಿರ ಮನೆಗಳಿಗೆ ಪಿಎನ್‌ಜಿಯಿಂದ ಅಡುಗೆ ತಯಾರಿಸುವ ಕಾರ್ಯ ನಡೆಯಲಿದೆ.
ಎಲ್‌ಪಿಜಿ ಅನಿಲ ಸಿಲಿಂಡರ್ ದರ ತಿಂಗಳಿಂದ ತಿಂಗಳಿಗೆ ಏರಿಕೆಯಾಗುತ್ತಲಿದ್ದು, ಗ್ರಾಹಕರಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ಆದರೆ ಸಾಮಾನ್ಯವಾಗಿ ಬಳಸುವ ಎಲ್‌ಪಿಜಿಗಿಂತ ಪಿಎನ್‌ಜಿ ಅನಿಲವು ಅಗ್ಗ ಮತ್ತು ಹೆಚ್ಚು ಸುರಕ್ಷಿತವಾಗಿದೆ. ಸಿಲಿಂಡರ್‌ಗಳನ್ನು ಮುಂಗಡ ಕಾಯ್ದಿರಿಸುವ ಜಂಜಾಟ ಗ್ರಾಹಕರಿಗೆ ಇನ್ನುಮುಂದೆ ತಪ್ಪಲಿದೆ. ಪಿಎನ್‌ಜಿ ಗಾಳಿಗಿಂತ ಹಗುರಾಗಿರುವ ಕಾರಣ ಒಂದು ವೇಳೆ ಸೋರಿಕೆಯಾದರೂ ವಿಸ್ತಾರವಾಗಿ ಹರಡದೆ, ನೇರವಾಗಿ ಮೇಲೆ ಹೋಗುತ್ತದೆ. ಹೀಗಾಗಿ ವ್ಯಾಪಕವಾಗಿ ಸಮಸ್ಯೆ ಉದ್ಭವಿಸದೇ, ಪರಿಸರ ಸ್ನೇಹಿಯೂ ಆಗಿದೆ.
ಪಿಎನ್‌ಜಿ ಅನಿಲ ಪೂರೈಕೆಗೆ ನವನಗರ, ಧಾರವಾಡದ ಗಾಂಧಿ ನಗರ, ಹುಬ್ಬಳ್ಳಿ ಬದಾಮಿ ನಗರ, ಬೆಂಗೇರಿ, ಮಯೂರಿ ಎಸ್ಟೇಟ್ ಸೇರಿದಂತೆ ಒಟ್ಟು ಆರು ನಿರ್ವಹಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅದರ ಜೊತೆಗೆ ಹೆಚ್ಚುವರಿಯಾಗಿ ಗೋಕುಲ ರಸ್ತೆ, ಶಿರೂರ ಪಾರ್ಕ್, ರಾಯಾಪುರ ಸೇರಿದಂತೆ ವಿವಿಧೆಡೆ ಪಿಎನ್‌ಜಿ ಪೂರೈಸುವ ಹಾಗೂ ಸ್ಥಗಿತಗೊಳಿಸುವ ಕೇಂದ್ರಗಳ ಸ್ಥಾಪಿಸುವ ಯೋಜನೆ ಇದೆ.
Kshetra Samachara
01/02/2021 12:50 pm