ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಒಂದು ಯೋಜನೆ ಪೂರ್ಣಗೊಳ್ಳುವ ಮೊದಲೇ ಮತ್ತೊಂದು ಜನ್ಮ ತಾಳುತ್ತದೆ.ಆದ್ರೇ ಮೊದಲು ಕೈಗೊಂಡ ಯೋಜನೆ ಪೂರ್ಣಗೊಳ್ಳದಿದ್ದರೂ ಪರವಾಗಿಲ್ಲ.ಮತ್ತೊಂದಕ್ಕೆ ಶಂಕುಸ್ಥಾಪನೆ ಗುದ್ದಲಿ ಪೂಜೆ ಮಾತ್ರ ನಿರ್ವಿಘ್ನದಿಂದ ನಡೆದು ಹೋಗುತ್ತದೆ.ಅಂತಹದ್ದೆ ಒಂದು ಅವ್ಯವಸ್ಥೆ ವಾಣಿಜ್ಯನಗರಿಯಲ್ಲಿ ಗೋಚರಿಸುತ್ತಿದೆ.
ಹೌದು..ಸುಮಾರು ವರ್ಷಗಳಿಂದ ನಡೆಯುತ್ತಿರುವ ಗಬ್ಬೂರ ಹತ್ತಿರದ ರಿಂಗ್ ರೋಡ್ ಕಾಮಗಾರಿ ಒಂದಿಲ್ಲೊಂದು ಕುಂಟು ನೆಪ ಹೇಳಿಕೊಂಡು ಕುಂಟುತ್ತಾ ಸಾಗಿದೆ.ಆದ್ರೇ ಜನಪ್ರತಿನಿಧಿಗಳು ಮಾತ್ರ ರಿಂಗ್ ರೋಡ್ ಕಾಮಗಾರಿ ಕಡೆಗೆ ಗಮನಕೊಡದೇ ಇದ್ದು,ಕಿತ್ತೂರು ಚೆನ್ನಮ್ಮ ವೃತ್ತದ ಬಳಿ ಪ್ಲೈಓವರ್ ಕಾಮಗಾರಿಗೆ ಶಿಲಾನ್ಯಾಸ ಮಾಡಿದ್ದು,ಹು-ಧಾ ಮಹಾನಗರ ಜನತೆಗೆ ಅಸಮಾಧಾವನ್ನುಂಟು ಮಾಡಿದೆ.
ಸಂಚಾರ ದಟ್ಟಣೆ ಕಡಿಮೆ ಮಾಡುವ ಹಿನ್ನೆಲೆಯಲ್ಲಿ ಜಾರಿಗೊಳಿಸಿದ ರಿಂಗ್ ರೋಡ್ ಕಾಮಗಾರಿ ಅಪೂರ್ಣ ಇರುವಾಗಲೇ ಪ್ಲೈಓವರ್ ಕಾರ್ಯಕ್ಕೆ ಮುಂದಾಗಿರುವುದು ಸರಿಯಲ್ಲ ಕೂಡಲೇ ರಿಂಗ್ ರೋಡ್ ಕಾಮಗಾರಿ ಪೂರ್ಣಗೊಳಿಸಿ ಪ್ಲೈಓವರ್ ನಿರ್ಮಾಣಕ್ಕೆ ಮುಂದಾಗಬೇಕು ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.
ಬಾರಿ ಗಾತ್ರದ ವಾಹನಗಳ ಸಂಚಾರ ನಿಯಂತ್ರಣ ಹಾಗೂ ಹು-ಧಾ ಮಹಾನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಹಿನ್ನೆಲೆಯಲ್ಲಿ ರಿಂಗ್ ರೋಡ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿತ್ತು.ಆದ್ರೇ ಈಗ ಯೋಜನೆ ಪೂರ್ಣಗೊಳ್ಳುವ ಮೊದಲೇ ಮತ್ತೊಂದು ಕಾಮಗಾರಿ ಕೈಗೆತ್ತಿಕೊಳ್ಳುವುದು ಸರಿಯಲ್ಲ ಎಂಬುವುದು ಸಾರ್ವಜನಿಕ ಅಭಿಪ್ರಾಯವಾಗಿದೆ...
ಈಗಾಗಲೇ 298 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 63, 218 ಹಾಗೂ 4 ನ್ನು ಸಂಪರ್ಕಿಸುವ 3.6 ಕೀ.ಮೀ ಉದ್ದದ ಚೆನ್ನಮ್ಮ ವೃತ್ತದ ಮೇಲು ರಸ್ತೆ, 25 ಕೋಟಿ ವೆಚ್ಚದಲ್ಲಿ ಕಲಘಟಗಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ 2.77 ಕಿ.ಮೀ ಚತುಷ್ಪಥ ರಸ್ತೆ ಹಾಗೂ ದಾಸ್ತಿಕೊಪ್ಪದ ಬಳಿ ಸೇತುವೆ ನಿರ್ಮಾಣ ಕಾಮಗಾರಿಯ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕೇಂದ್ರದ ಸಾರಿಗೆ ಹಾಗೂ ಹೆದ್ದಾರಿ, ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳ ಸಚಿವ ನಿತಿನ್ ಗಡ್ಕರಿ, ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.ಶಿಲಾನ್ಯಾಸ ಮಾಡಿದ್ದೇನೋ ಸರಿ ಆದ್ರೆ ಒಂದಾದರೂ ಪೂರ್ಣಗೊಳಿಸಿ ಎಂಬುವುದು ಸಾರ್ವಜನಿಕರ ಒತ್ತಾಸೆಯಾಗಿದೆ.
Kshetra Samachara
15/01/2021 04:56 pm