ಹುಬ್ಬಳ್ಳಿ: ಹಿಜಾಬ್ ಕುರಿತು ಇಂದು ತೀರ್ಪು ಪ್ರಕಟಗೊಳ್ಳುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಾದ್ಯಂತ ಶಾಲಾ, ಕಾಲೇಜುಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ ನಿಯೋಜನೆ ಮಾಡಲಾಗಿದೆ.
ಹೌದು..ಹುಬ್ಬಳ್ಳಿಯ ವಿವಿಧೆಡೆ ಶಾಲಾ ಕಾಲೇಜುಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಹಿಜಾಬ್ ವಿವಾದಕ್ಕೆ ಕಾರಣವಾಗಿದ್ದ ಮೂರು ಸಾವಿರಮಠ ವಿದ್ಯಾವರ್ಧಕ ಸಂಘದ ಮಹಿಳಾ ಪದವಿ ಕಾಲೇಜು ಬಳಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಕಾಲೇಜು ಬಳಿ ಡಿಎಆರ್ ತುಕಡಿ ನಿಯೋಜನೆ ಮಾಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಜರುಗಿಸಲಾಗಿದೆ. ಈಗಾಗಲೇ ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಶಾಲಾ ಕಾಲೇಜುಗಳಲ್ಲಿ ಚಟುವಟಿಕೆಗಳು ಎಂದಿನಂತೆ ಆರಂಭಗೊಂಡಿವೆ.
ಇನ್ನೂ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ನಿಷೇಧಾಜ್ಞೆ ಜಾರಿಯಾಗಿರುವ ಬೆನ್ನಲ್ಲೇ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಚನ್ನಮ್ಮ ವೃತ್ತದಲ್ಲಿ ಕೆ ಎಸ್ ಆರ್ ಪಿ ತುಕಡಿ ಸೇರಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ. ನಗರದ ವಿವಿಧೆಡೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಈಗಾಗಲೇ ಧಾರವಾಡ ಜಿಲ್ಲಾಡಳಿತ ಜರುಗಿಸಿದ್ದು, ಗುಂಪು ಸೇರದಂತೆ, ಮಾರಕಾಸ್ತ್ರ ಒಯ್ಯದಂತೆ ನಿರ್ಬಂಧ ಹೇರಲಾಗಿದೆ. ಅಲ್ಲದೇ ವಿಜಯೋತ್ಸವ, ಮೆರವಣಿಗೆ ಇತ್ಯಾದಿಗಳ ಮೇಲೆಯೂ ನಿರ್ಬಂಧ ಹಾಕಲಾಗಿದೆ.
Kshetra Samachara
15/03/2022 09:38 am