ಹುಬ್ಬಳ್ಳಿ: ಹೇಳಿ ಕೇಳಿ ಅದು ಬೃಹತ್ ಕೈಗಾರಿಕಾ ಸಚಿವರಿರೋ ಜಿಲ್ಲೆ. ಆ ಜಿಲ್ಲೆಯಲ್ಲೇ ಕೆಐಎಡಿಬಿ ವ್ಯಾಪ್ತಿಯ ನಿವೇಶನ ಹಂಚಿಕೆಯಲ್ಲೀಗ ಬಾರೀ ಭ್ರಷ್ಟಾಚಾರ ನಡೆದಿರೋ ಬಗ್ಗೆ ಆರೋಪ ಕೇಳಿ ಬಂದಿದೆ. ಮಹಿಳಾ ಉದ್ಯಮಿಗಳಿಗೆ ಮೀಸಲಾಗಿದ್ದ ನಿವೇಶನ ವಿಚಾರದಲ್ಲಿ ಕೆಐಎಡಿಬಿ ಬೃಹತ್ ಭ್ರಷ್ಟಾಚಾರ ನಡೆಸಿದೆಯಾ ಅನ್ನೋ ಅನುಮಾನಗಳ ಹುತ್ತ ಹುಟ್ಟಿಕೊಂಡಿದೆ. ಅದೇನು ಅಂತ ನೀವೇ ನೋಡಿ..
ಹುಬ್ಬಳ್ಳಿ-ಧಾರವಾಡದಲ್ಲಿ ಕೆಐಎಡಿಬಿಯಿಂದ ನಿವೇಶನ ಹಂಚಿಕೆಯಲ್ಲಿ ಬೃಹತ್ ಅವ್ಯವಹಾರ ಆಗಿದೆ ಅನ್ನೋ ಆರೋಪ ಕೇಳಿಬಂದಿದೆ. ಮಹಿಳಾ ಉದ್ಯಮಿಗಳಿಗೆ ಮೀಸಲಿರಿಸಿದ್ದ 72 ನಿವೇಶನಗಳ ಹಂಚಿಕೆಯಲ್ಲಿ ಕೆಐಎಡಿಬಿ ಅಧಿಕಾರಿಗಳು ಬೃಹತ್ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿಲಾಗಿದೆ.
ಕಳೆದ ಜನವರಿಯಲ್ಲಿ ಹುಬ್ಬಳ್ಳಿಯ ಗಾಮನಗಟ್ಟಿಯ ಕೈಗಾರಿಕಾ ಪ್ರದೇಶದಲ್ಲಿ ಮಹಿಳಾ ಉಧ್ಯಮಿಗಳಿಗಾಗಿ ಅವರ ಉದ್ಯೋಗಾಭಿವೃದ್ದಿ ದೃಷ್ಠಿಯಿಂದ ಆನ್ ಲೈನ್ ಮೂಲಕ ಆರ್ಜಿ ಅಹ್ವಾನಿಸಲಾಗಿತ್ತು. ಸುಮಾರು 500ಕ್ಕೂ ಹೆಚ್ಚು ಆರ್ಜಿ ಸಲ್ಲಿಕೆಯಾಗಿ ಎಲ್ಲರು ತಲಾ 3ಲಕ್ಷ ಡಿಪಾಸಿಟ್ ಮಾಡಿದ್ದರು.
ಅಲ್ಲದೇ ಜಿಲ್ಲಾ ಸಿಂಗಲ್ ವಿಂಡೋ ಸ್ಕ್ರೀನಿಂಗ್ ಕಮೀಟಿ ಆ ಎಲ್ಲ ಅರ್ಜಿಗಳನ್ನು ಪರಿಶೀಲನೆ ಮಾಡಿತ್ತು. ಅಲ್ಲದೆ ಅರ್ಹ 142 ಫಲಾನುಭವಿಗಳಿಗೆ ಈ ನಿವೇಶನಗಳನ್ನ ಹಂಚಿಕೆ ಮಾಡಲು ಆಯ್ಕೆ ಮಾಡಿತ್ತು.
ಆದರೆ ಸ್ಕ್ರೀನಿಂಗ್ ಕಮೀಟಿ ಮಾಡಿದ್ದ ಆಯ್ಕೆ ಪಟ್ಟಿಯನ್ನು ಕೆಐಎಡಿಬಿ ಅಧಿಕಾರಿಗಳು ಇದುವರೆಗೂ ಬಿಡುಗಡೆ ಮಾಡದೆ, ಅದರ ಬದಲಾಗಿ ಮತ್ತೊಂದು ಕಮೀಟಿಯನ್ನು ಆಯ್ಕೆ ಮಾಡಿ ಅನುಮೋದನೆಗೆ ಸಿದ್ದತೆ ನಡೆಸಿದ್ದಾರೆ. ಆಡಳಿತಾರೂಢ ಪಕ್ಷದ ಮುಖಂಡರು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವಿರುದ್ಧ ಈಗ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ.
ಇನ್ನು ಕೈಗಾರಿಕಾ ಇಲಾಖೆಯಿಂದ ಮತ್ತೊಂದು ನಡಾವಳಿ ಮಾಡಿ ಅಧಿಕಾರಿಗಳು ನಿಯಮ ಬದಲಾವಣೆ ಮಾಡಿದ್ದು, ಈ ಮೂಲಕ ಜಮೀನು ಸರ್ವೇ ಕಮೀಟಿ ಮಾಡಿ ನಿವೇಶನ ಹಂಚಿಕೆ ಮಾಡಲು ತಯಾರಿ ನಡೆಸಿದ್ದಾರೆ.
ಈ ಮುಂಚೆ ನಿವೇಶನಗಳ ಹಂಚಿಕೆ ವಿಚಾರದಲ್ಲಿ ಕೇವಲ ಫಲಾನುಭವಿಗಳ ಮೂಲಕವೇ ಚೀಟಿ ಎತ್ತುವ ಮೂಲಕ ಹಾಗೂ ನೇರ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ಮಾಡಲಾಗುತ್ತಿತ್ತು.
ಆದರೆ ಇದೀಗ ಆ ಆಯ್ಕೆ ಪ್ರಕ್ರಿಯೆಯನ್ನು ತಗೆದು ಹಾಕಿ ನೂತನ ಆಯ್ಕೆ ಪ್ರಕ್ರಿಯೆಗೆ ಅನುಮೋದನೆಗೆ ಎಲ್ಲ ತಯಾರಿ ನಡೆಸಿದ್ದು, ಇದರಲ್ಲೂ ಅತ್ಯಂತ ಬೃಹತ್ ಭ್ರಷ್ಟಾಚಾರ ಎಸಗಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇನ್ನೂ ಈ ಹಿಂದೆ ಇದ್ದ ಆಯ್ಕೆ ಪ್ರಕ್ರಿಯೆಯಿಂದ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ತೊಂದರೆಯಾಗುತ್ತಿತ್ತು.
ಆ ಕಾರಣ ತಮ್ಮ ಬೆಂಬಲಿಗರಿಗೆ ನಿವೇಶನ ನೀಡಲು ಜಿಲ್ಲೆಯ ಪ್ರಭಾವಿ ರಾಜಕಾರಣಿಗಳು ಈ ರೀತಿಯ ಪಿತೂರಿ ನಡೆಸಿದ್ದು, ಪಾರದರ್ಶಕವಾಗಿ ನಡೆಯುತ್ತಿದ್ದ ಹಂಚಿಕೆ ಪ್ರಕ್ರಿಯೆ ಗಾಳಿಗೆ ತೂರಿ ತಮ್ಮ ಬೆಂಬಲಿಗರ ಅನುಕೂಲಕ್ಕಾಗಿ ಈ ರೀತಿಯ ಆಯ್ಕೆ ಪ್ರಕ್ರಿಯೆಗೆ ಅನುಮೋದನೆ ತರಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಮಹಿಳಾ ಬಡ ಉದ್ಯಮಿಗಳಿಗೆ ಅನುಕೂಲವಾಗುವ ದೃಷ್ಠಿಯಿಂದ ಸರ್ಕಾರ ಅನುಕೂಲ ಮಾಡಿಕೊಟ್ಟಿದ್ದ ನಿವೇಶನ ಹಂಚಿಕೆಯಲ್ಲಿ ರಾಜಕಾರಣಿಗಳು ತಮ್ಮ ಪ್ರಭಾವ ಬಳಿಸಿ ಹಳ್ಳ ಹಿಡಿಸಿದ್ದಾರೆ.
ಅಲ್ಲದೇ ಪಾರದರ್ಶಕವಾಗಿ ನಡೆದಿದ್ದ ಆಯ್ಕೆ ಪ್ರಕ್ರಿಯೇ ರದ್ದು ಮಾಡಿ ತಮ್ಮ ಬೆಂಬಲಿಗರಿಗೆ ನಿವೇಶನ ಹಂಚಿಕೆ ಮಾಡಲು ಎಲ್ಲಿಲ್ಲದ ಕಸರತ್ತು ನಡೆಸಿದ್ದಾರೆ.ಇನ್ನಾದರೂ ಇಂತಹ ಅವ್ಯವಹಾರಗಳಿಗೆ ಸರ್ಕಾರ ಕಡಿವಾಣ ಹಾಕುವ ಮೂಲಕ ಅರ್ಹ ಫಲಾನುಭವಿಗಳಿಗೆ ಇಂತಹ ಯೋಜನೆಗಳ ಸದುಪಯೋಗ ಮಾಡಿಕೊಡಬೇಕಿದೆ.
Kshetra Samachara
27/11/2020 08:46 pm