ಹುಬ್ಬಳ್ಳಿ: ಅವರೆಲ್ಲರೂ ಅವಳಿನಗರದ ಸ್ವಚ್ಛತೆಗಾಗಿ ಶ್ರಮಿಸುವ ಕಾರ್ಮಿಕರು. ಆದರೆ ಈ ಕಾರ್ಮಿಕರ ಕಷ್ಟವನ್ನು ಕೇಳುವವರೇ ಇಲ್ಲದಂತಾಗಿದೆ. ಜೀವದ ಹಂಗು ತೊರೆದು ಕೆಲಸ ಮಾಡುವವರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಪಾಲಿಕೆ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಶ್ರಮ ಜೀವಿಗಳ ಜೀವಕ್ಕೆ ಕಿಂಚಿತ್ತೂ ಕಾಳಜಿಯೇ ಇಲ್ಲವಾಗಿದೆ.
ರಾಜ್ಯದಲ್ಲಿ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹು-ಧಾ ಮಹಾನಗರ ಪಾಲಿಕೆಯಲ್ಲಿ ಮೂಲ ಸೌಲಭ್ಯಗಳೇ ಇಲ್ಲದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೌದು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 1,800 ಜನ ಪೌರಕಾರ್ಮಿಕರು ನೇರ ವೇತನ ಹಾಗೂ ಹೊರ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇವರಿಗೆ ನೀಡಬೇಕಾದ ಹ್ಯಾಂಡ್ ಗ್ಲೌಸ್, ಮಾಸ್ಕ್ ಹಾಗೂ ಬೂಟ್ ಸೇರಿದಂತೆ ರಕ್ಷಣಾ ಕಿಟ್ ವಿತರಿಸದೇ ಇರುವುದು ವಿಪರ್ಯಾಸಕರ ಸಂಗತಿಯಾಗಿದೆ.
ಇನ್ನೂ ಈ ಕುರಿತು ಸಭೆ ನಡೆಸಿದ ಸಪಾಯಿ ಕರ್ಮಚಾರಿ ನಿಗಮದ ಅಧ್ಯಕ್ಷರು, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಇನ್ನಷ್ಟು ಸುಧಾರಣೆಗಳಾಗಬೇಕು. ಪೌರ ಕಾರ್ಮಿಕರ ಬ್ಯಾಂಕ್ ಪಾಸ್ ಬುಕ್ ಹಾಗೂ ಎಟಿಎಂ ಕಾರ್ಡ್‌ಗಳನ್ನು ಗುತ್ತಿಗೆದಾರರು ತೆಗೆದುಕೊಳ್ಳಬಾರದು. ಗುತ್ತಿಗೆ ಆಧಾರಿತ ಕಾರ್ಮಿಕರಿಗೆ ನೇರ ವೇತನ ಪಾವತಿಸಬೇಕು. ಈಗಾಗಲೇ ನಿಧನ ಹೊಂದಿದ 7 ಜನ ಪೌರ ಕಾರ್ಮಿಕರ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಬೇಕು. ದಿನನಿತ್ಯದ ಕೆಲಸದಿಂದ ಪೌರಕಾರ್ಮಿಕರ ಆರೋಗ್ಯದ ಮೇಲೆ ಪರಿಣಾಮಗಳಾಗುತ್ತವೆ, ಜೀವಿತಾವಧಿ ಇಳಿಮುಖವಾಗುತ್ತದೆ. ಆರೋಗ್ಯದ ಹಿತದೃಷ್ಟಿಯಿಂದ ಮಾಸ್ಕ್, ಬೂಟು, ಗ್ಲೌಸ್, ರೇನ್ ಕೋಟ್, ಸಮವಸ್ತ್ರ, ವೈದ್ಯಕೀಯ ಕಿಟ್ ಮತ್ತಿತರ ಸಾಮಗ್ರಿಗಳನ್ನು ಒದಗಿಸಬೇಕು ಎಂದು ಪಾಲಿಕೆ ಆಯುಕ್ತರಿಗೆ ನಿರ್ದೇಶನ ನೀಡಿದರು.
ಒಟ್ಟಿನಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುವ ಶ್ರಮಜೀವಿಗಳ ಕಾರ್ಯಕ್ಕೆ ಬೆಲೆ ಕೊಡಬೇಕಿದೆ. ಇನ್ನಾದರೂ ಪಾಲಿಕೆ ಆಯುಕ್ತರು ಈ ಬಗ್ಗೆ ಕಾಳಜಿ ವಹಿಸುವ ಮೂಲಕ ಪೌರಕಾರ್ಮಿಕರ ಹಿತವನ್ನು ಕಾಪಾಡಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
25/08/2022 01:18 pm